ಮಂಗಳೂರು: ಹಲ್ಲೆ, ದರೋಡೆ ಪ್ರಕರಣ; ಆರೋಗಳಿಗೆ ಶಿಕ್ಷೆ

Update: 2019-04-20 14:52 GMT

ಮಂಗಳೂರು, ಎ.20: ನಗರದ ಹಂಪನಕಟ್ಟೆಯ ರೆಡಿಮೇಡ್ ಬಟ್ಟೆ ಮಳಿಗೆ ಮಾಲಕ ಕನ್ನಯಲಾಲ್ ಗುಪ್ತ ಅವರ ಮೇಲೆ ಹಲ್ಲೆಗೈದು ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳಿಗೆ ತಲಾ 7 ವರ್ಷಗಳ ಸಜೆ ಮತ್ತು ತಲಾ 10,000 ರೂ. ದಂಡ ವಿಧಿಸಿ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

ಫರಂಗಿಪೇಟೆಯ ಇರ್ಫಾನ್ (39) ಮತ್ತು ಮುಹಮದ್ ಮುಶ್ತಾಕ್ (30), ಬಿ.ಸಿ.ರೋಡ್ ಶಾಂತಿ ಅಂಗಡಿಯ ಸಮೀರ್ ಕೆ. ಎಂ. (27), ಪುದು ಗ್ರಾಮದ ಮುಹಮದ್ ಇರ್ಫಾನ್ (35) ಮತ್ತು ಮೇರೆಮಜಲಿನ ದಿಲನ್ ಅವಿನಾಶ್ ಕಾರ್ಡೋಜಾ (29) ಶಿಕ್ಷೆಗೊಳಗಾದವರು.

2015ರ ಮಾರ್ಚ್ 13ರಂದು ಸಂಜೆ ಕಾರಿನಲ್ಲಿ ಬಟ್ಟೆ ಮಳಿಗೆಗೆ ನುಗ್ಗಿದ ಈ ಆರೋಪಿಗಳು ಅಲ್ಲಿದ್ದ ಕನ್ನಯಲಾಲ್ ಗುಪ್ತ ಅವರ ಮೇಲೆ ಕಬ್ಬಿಣದ ಪೈಪ್‌ನಿಂದ ಮತ್ತು ಕೈಯಿಂದ ಹಲ್ಲೆ ನಡೆಸಿ ಲ್ಯಾಪ್‌ಟಾಪ್‌ನ್ನು ಎಳೆದು ಫುಟ್‌ಪಾತ್‌ಗೆ ಎಸೆದು ಹಾನಿಗೊಳಿಸಿದ್ದಲ್ಲದೆ ಅವರ ಕಿಸೆಯಲ್ಲಿದ್ದ 2,700 ರೂ. ಮತ್ತು ಡ್ರಾಯರ್‌ನಲ್ಲಿದ್ದ 25,800 ರೂ.ವನ್ನು ದರೋಡೆ ಮಾಡಿಕೊಂಡು ಹೋಗಿದ್ದರು ಎಂದು ಆರೋಪಿಸಲಾಗಿತ್ತು.

ವ್ಯವಹಾರಕ್ಕೆ ಸಂಬಂಧಿಸಿದ ದ್ವೇಷ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಶಾಂತಾರಾಂ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲನ ಗೌಡ ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

ಶಿಕ್ಷೆಯ ವಿವರ: ಐಪಿಸಿ ಸೆ.143 (ಅಕ್ರಮ ಪ್ರವೇಶ) ಅನ್ವಯ 7 ದಿನಗಳ ಶಿಕ್ಷೆ ಮತ್ತು ತಲಾ 1,000 ರೂ. ದಂಡ. ಐಪಿಸಿ 147 ಮತ್ತು 148 (ದೊಂಬಿ) ಅನ್ವಯ ತಲಾ 1 ತಿಂಗಳ ಸಜೆ ಮತ್ತು 5,000 ರೂ. ದಂಡ, ,ಐಪಿಸಿ 448 (ಅಕ್ರಮ ಕೂಟ) ಅನ್ವಯ 15 ದಿನಗಳ ಶಿಕ್ಷೆ ಮತ್ತು ತಲಾ 1,000 ರೂ.ದಂಡ, ಐಪಿಸಿ 323 (ಕೈಯಿಂದ ಹಲ್ಲೆ) ಅನ್ವಯ 15 ದಿನಗಳ ಸಜೆ ಮತ್ತು ತಲಾ 1,000 ರೂ. ದಂಡ, ಐಪಿಸಿ 324 (ಕಬ್ಬಿಣದ ಪೈಪ್‌ನಿಂದ ಹಲ್ಲೆ) ಅನ್ವಯ 1 ತಿಂಗಳ ಸಜೆ ಮತ್ತು 5,000 ರೂ. ದಂಡ, ಐಪಿಸಿ 427 (ಸೊತ್ತು ನಾಶ) ಅನ್ವಯ 1 ತಿಂಗಳ ಸಜೆ ಮತ್ತು ತಲಾ 1,000 ರೂ. ದಂಡ, ಐಪಿಸಿ 395 (ದರೋಡೆ) ಮತ್ತು ಐಪಿಸಿ 397 (ದರೋಡೆ ವೇಳೆ ಹಲ್ಲೆ) ಅನ್ವಯ 7 ವರ್ಷ ಸಜೆ ಮತ್ತು ತಲಾ 10,000 ರೂ. ದಂಡ ವಿಧಿಸಲಾಗಿದೆ.

ಒಟ್ಟು ದಂಡ ಮೊತ್ತದಲ್ಲಿ 1 ಲಕ್ಷ ರೂ.ಗಳನ್ನು ಸಂತ್ರಸ್ತ, ದೂರುದಾರ ಕನ್ನಯ ಲಾಲ್ ಅವರಿಗೆ ನಷ್ಟ ಪರಿಹಾರವಾಗಿ ಪಾವತಿಸಬೇಕು ಮತ್ತು ಉಳಿದ ಹಣವನ್ನು ಸರಕಾರಕ್ಕೆ ನೀಡಬೇಕೆಂದು ನ್ಯಾಯಾಧೀಶರು ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News