ಮೀನುಗಾರಿಕಾ ವಿವಿಗೆ ನೂತನ ಡೀನ್ ನೇಮಕ
ಮಂಗಳೂರು, ಎ.20: ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬೀದರ ಇದರ ಅಂಗಸಂಸ್ಥೆಯಾದ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ನೂತನ ಡೀನ್ ಆಗಿ ಪ್ರಾದ್ಯಾಪಕ ಡಾ.ಎಸ್.ಎಂ. ಶಿವಪ್ರಕಾಶ್ ನೇಮಕಗೊಂಡಿದ್ದಾರೆ.
ಮೂರು ದಶಕಗಳ ಪ್ರಾಧ್ಯಾಪಕ ವೃತ್ತಿಯ ಅನುಭವ ಹೊಂದಿರುವ ಇವರು ಈ ಮೊದಲು ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕಾ ವಿಶ್ವವಿದ್ಯಾನಿಲಯ ಬೀದರ ಇಲ್ಲಿನ ವಿಸ್ತರಣಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಾರ್ವೆಯ ಬರ್ಗೆನ್ ವಿಶ್ವವಿದ್ಯಾನಿಲಯದಲ್ಲಿ ಒಂದು ವರ್ಷದ ಪಿಜಿ ಡಿಪ್ಲೊಮಾ, ಇಂಗ್ಲೆಂಡಿನ ಸ್ಟರ್ಲಿಂಗ್ ವಿಶ್ವವಿದ್ಯಾನಿಲಯದಲ್ಲಿ 10 ತಿಂಗಳ ಸಂಶೋಧನಾ ವ್ಯಾಸಾಂಗ, ಕೆನಡಾದ ಡಾಲ್ಹೌಸಿ ವಿಶ್ವವಿದ್ಯಾನಿಲಯದಿಂದ ಕಡಲ ಕಾನೂನು ಕುರಿತು ಅಂತಾರಾಷ್ಟ್ರೀಯ ತರಬೇತಿ ಪಡೆದಿರುತ್ತಾರೆ. 1986ರಲ್ಲಿ ಇಂಡಿಯನ್ ಅಕಾಡಮಿ ಆಫ್ ಇಕ್ತಿಯಾಲಜಿಯಿಂದ ಯುವವಿಜ್ಞಾನಿ ಪ್ರಶಸ್ತಿ ಹಾಗೂ ಇಂಟರ್‌ಲ್ಯಾಬ್ ಅಂಬಾಲ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.