ಬಾಲಕರಿಗೆ ಲೈಂಗಿಕ ಕಿರುಕುಳ ಪ್ರಕರಣ: ಚಂದ್ರ ಹೆಮ್ಮಾಡಿ ಜಾಮೀನು ಅರ್ಜಿ ತಿರಸ್ಕೃತ

Update: 2019-04-20 15:17 GMT

ಉಡುಪಿ, ಎ.20: ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಒಟ್ಟು 21 ಪೋಕ್ಸೊ ಪ್ರಕರಣಗಳ ಆರೋಪಿ ಕುಂದಾಪುರದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ (40) ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಇಂದು ಆದೇಶ ನೀಡಿದೆ.

ಆರೋಪಿ ಚಂದ್ರ ಹೆಮ್ಮಾಡಿ ತನ್ನ ವಿರುದ್ಧ ದಾಖಲಾದ 21 ಪ್ರಕರಣಗಳ ಪೈಕಿ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಮಾ.27ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು. ಇದಕ್ಕೆ ಪ್ರಾಸಿಕ್ಯೂಶನ್ ಪರ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ಎ.9ರಂದು ಆಕ್ಷೇಪಣೆ ಸಲ್ಲಿಸಿದ್ದರು.

ಈ ಸಂಬಂಧ ಎ.10ರಂದು ವಾದ ಪ್ರತಿವಾದಗಳು ನಡೆದಿದ್ದು, ಅಭಿ ಯೋಜಕ ವಿಜಯ ವಾಸು ಪೂಜಾರಿ, ಪೋಕ್ಸೊ ಕಾಯಿದೆ ಜಾರಿಯಾದ ನಂತರ ಇಡೀ ದೇಶದಲ್ಲೇ ಆರೋಪಿಯೊಬ್ಬನ ವಿರುದ್ಧ 21 ಪ್ರಕರಣಗಳು ದಾಖಲಾದ ಏಕೈಕ ಪ್ರಕರಣ ಇದಾಗಿದೆ. ಆದುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ಜಾಮೀನು ಅರ್ಜಿಯನ್ನು ನಿರಾಕರಣೆ ಮಾಡುವಂತೆ ನ್ಯಾಯಾ ಧೀಶರಲ್ಲಿ ಮನವಿ ಮಾಡಿದ್ದರು. ವಾದ ಪ್ರತಿ ವಾದವನ್ನು ಆಲಿಸಿದ ಜಿಲ್ಲಾ ವಿಶೇಷ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಆರೋಪಿಯ ಜಾಮೀನು ಅರ್ಜಿುನ್ನು ತಿರಸ್ಕರಿಸಿ ಆದೇಶ ನೀಡಿದರು.

ಸುದ್ದಿ ಸಂಬಂಧ ದಾರಿ ತೋರಿಸುವ ನೆಪದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಹಾಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಲ್ಲಿ ಚಂದ್ರ ಹೆಮ್ಮಾಡಿಯನ್ನು 2018ರ ನ.28ರಂದು ಪೊಲೀಸರು ಬಂಧಿಸಿದ್ದರು. ಚಂದ್ರ ಹೆಮ್ಮಾಡಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ 16, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಹಾಗೂ ಕುಂದಾಪುರ ಗ್ರಾಮಾಂತರ ಮತ್ತು ಕೊಲ್ಲೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣಗಳು ಪೋಕ್ಸೊ ಕಾಯಿದೆಯಡಿ ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News