ಉತ್ತರ ಐರ್‌ ಲ್ಯಾಂಡ್‌ನಲ್ಲಿ ಪತ್ರಕರ್ತೆಯ ಹತ್ಯೆ: ಇಬ್ಬರು ಆರೋಪಿಗಳ ಬಂಧನ

Update: 2019-04-20 15:25 GMT

ಲಂಡನ್, ಎ. 20: ಉತ್ತರ ಐರ್‌ಲ್ಯಾಂಡ್‌ನಲ್ಲಿ ಪತ್ರಕರ್ತೆಯೊಬ್ಬರನ್ನು ಗುಂಡು ಹಾರಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹದಿಹರೆಯದವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

18 ಮತ್ತು 19 ವರ್ಷದ ಆರೋಪಿಗಳನ್ನು ಭಯೋತ್ಪಾದಕ ನಿಗ್ರಹ ಕಾನೂನಿನಡಿ ಲಂಡನ್‌ಡೆರಿಯಲ್ಲಿ ಬಂಧಿಸಲಾಗಿದೆ ಹಾಗೂ ವಿಚಾರಣೆಗಾಗಿ ಅವರನ್ನು ಬೆಲ್‌ಫಾಸ್ಟ್‌ಗೆ ಕರೆದೊಯ್ಯಲಾಗಿದೆ ಎಂದು ಉತ್ತರ ಐರ್‌ಲ್ಯಾಂಡ್‌ನ ಪೊಲೀಸ್ ಸರ್ವಿಸ್ ತಿಳಿಸಿದೆ.

ಪತ್ರಕರ್ತೆ ಲೈರಾ ಮೆಕೀ ಅವರ ತಲೆಗೆ ಡೆರಿ ಎಂಬಲ್ಲಿ ಗುರುವಾರ ಸಂಜೆ ಗುಂಡು ಹಾರಿಸಲಾಯಿತು. ನ್ಯೂ ಐಆರ್‌ಎ ಪಾರಾಮಿಲಿಟರಿ ಗ್ರೂಪ್‌ಗೆ ಸೇರಿದ ಭಿನ್ನಮತೀಯ ರಿಪಬ್ಲಿಕನ್ನರು ಗುಂಡು ಹಾರಿಸಿದ್ದಾರೆ ಎಂಬುದಾಗಿ ಪೊಲೀಸರು ಭಾವಿಸಿದ್ದಾರೆ. ಉತ್ತರ ಐರ್‌ಲ್ಯಾಂಡ್‌ನ ಎರಡನೇ ಅತಿ ದೊಡ್ಡ ನಗರ ಡೆರಿಯಲ್ಲಿರುವ ಕ್ರೇಗನ್ ಎಸ್ಟೇಟ್‌ನಲ್ಲಿ ಭಿನ್ನಮತೀಯ ರಿಪಬ್ಲಿಕನ್ನರು ಪೊಲೀಸರೊಂದಿಗೆ ಘರ್ಷಣೆಗಿಳಿದಾಗ ಈ ಘಟನೆ ಸಂಭವಿಸಿದೆ.

29 ವರ್ಷದ ಪತ್ರಕರ್ತೆಯ ಸಾವಿಗೆ ಭಾರೀ ಸಂತಾಪ ವ್ಯಕ್ತವಾಗಿದೆ.

ಲೈರಾ ಮೆಕೀ ಡೆರಿ ನಗರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ವರದಿ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸಾಯುವುದಕ್ಕೂ ಮೊದಲು ಲೈರಾ ಗಲಭೆಗಳಿಗೆ ಸಂಬಂಧಿಸಿದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಹಾಗೂ ‘‘ಡೆರಿಯಲ್ಲಿ ಇಂದು ರಾತ್ರಿಯ ದೃಶ್ಯ. ಸಂಪೂರ್ಣ ಹುಚ್ಚುತನ’’ ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News