ಶುಭ ಶುಕ್ರವಾರದಂದು ಮಾನವ ಸಾಗಣೆ ಸಂತ್ರಸ್ತರಿಗೆ ಮಿಡಿದ ಪೋಪ್

Update: 2019-04-20 15:44 GMT

ರೋಮ್, ಎ. 20: ಪೋಪ್ ಫ್ರಾನ್ಸಿಸ್, ‘ಶುಭ ಶುಕ್ರವಾರ’ದ ಸೇವೆಗಳನ್ನು ಮಾನವ ಸಾಗಣೆಯ ಬಲಿಪಶುಗಳು ಮತ್ತು ವಲಸಿಗರ ಬವಣೆಗಾಗಿ ಅರ್ಪಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ ಸಂತ್ರಸ್ತರ ಬವಣೆಯನ್ನು ದುರುಪಯೋಗಪಡಿಸಿಕೊಳ್ಳುವ ‘ಕವಚಧಾರಿ ಹೃದಯ’ಗಳ ನಾಯಕರನ್ನು ಅವರು ಟೀಕಿಸಿದ್ದಾರೆ.

ರೋಮನ್ ಕೆಥೋಲಿಕ್ ನಾಯಕನಾಗಿ ತನ್ನ ಏಳನೇ ವರ್ಷದ ಈಸ್ಟರ್ ಋತುವನ್ನು ಆಚರಿಸುತ್ತಿರುವ ಫ್ರಾನ್ಸಿಸ್, ರೋಮ್‌ನ ಕೊಲೋಸಿಯಮ್‌ನಲ್ಲಿ ನಡೆದ ಸಾಂಪ್ರದಾಯಿಕ ‘ವಯಾ ಕ್ರೂಸಿಸ್’ (ಶಿಲುಬೆಯ ಮಾರ್ಗ) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಾಗವಹಿಸಿದರು.

ಯೇಸು ಕ್ರಿಸ್ತರ ಜೀವನದ ಕೊನೆಯ ನಾಲ್ಕು ಗಂಟೆಗಳನ್ನು ಸ್ಮರಿಸುವ ‘14 ಸ್ಟೇಶನ್ಸ್ ಆಫ್ ದ ಕ್ರಾಸ್’ ವೇಳೆ, 80 ವರ್ಷದ ಇಟಾಲಿಯನ್ ನನ್ ಬರೆದ ಆಧ್ಯಾತ್ಮಿಕ ಸಾಲುಗಳನ್ನು ಭಾಷಣಕಾರರು ಓದಿದರು. ಕಳ್ಳಸಾಗಣೆಯಾದ ಮಹಿಳೆಯರು ಮತ್ತು ಮಕ್ಕಳಿಗಾಗಿ ಮಾಡಿದ ಕೆಲಸಕ್ಕಾಗಿ ಈ ನನ್‌ಗೆ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ.

ಕಾರ್ಯಕ್ರಮದ ಕೊನೆಯಲ್ಲಿ, ಪೋಪ್ ಫ್ರಾನ್ಸಿಸ್ ಪ್ರಾರ್ಥನೆಯೊಂದನ್ನು ಓದಿದರು. ಈ ಪ್ರಾರ್ಥನೆಯಲ್ಲಿ ಅವರು ಬಡವರು, ಹಸಿವು, ಹಿರಿಯರು, ಶೋಷಣೆಗೊಳಗಾದ ಮಕ್ಕಳು ಮತ್ತು ಪರಿಸರಗಳನ್ನು ಪ್ರಸ್ತಾಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News