ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಸಂಭ್ರಮದ ಈಸ್ಟರ್

Update: 2019-04-20 16:33 GMT

ಕಾಸರಗೋಡು: ಯೇಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು  ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು.

ಚರ್ಚ್‌ಗಳಲ್ಲಿ ಶನಿವಾರ ರಾತ್ರಿ ಈಸ್ಟರ್‌ ಹಬ್ಬದ ಬಲಿಪೂಜೆ ನಡೆದವು. ಕಯ್ಯಾರು ಕ್ರಿಸ್ತ ರಾಜ ದೇವಾಲಯದಲ್ಲಿ ನಡೆದ ವಿಧಿ ವಿಧಾನವನ್ನು ಧರ್ಮಗುರು  ವಂದನೀಯ ಫಾದರ್ ವಿಕ್ಟರ್ ಡಿಸೋಜ ನೆರವೇರಿಸಿದರು.  ಹೊಸ ಅಗ್ನಿಯ ಆಶೀರ್ವಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹೊಸ ಅಗ್ನಿಯಿಂದ ಈಸ್ಟರ್‌ ಮೊಂಬತ್ತಿಯನ್ನು ಧರ್ಮ ಗುರುಗಳು ಬೆಳಗಿಸಿದ ಬಳಿಕ ಭಾಗವಹಿಸಿದ್ದ ಸಮಸ್ತ ಕ್ರೈಸ್ತರು ಆ ಅಗ್ನಿಯ ಮೂಲಕ ಮೇಣದ ಬತ್ತಿ ಉರಿಸಿ ಪ್ರಾರ್ಥನೆ ಸಲ್ಲಿಸಿದರು.

ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಯ ಆಯ್ದ ಭಾಗಗಳ ವಾಚನದ ಬಳಿಕ ಧರ್ಮಗುರುಗಳು ಪ್ರವಚನ ಮತ್ತು ಸಂದೇಶ ನೀಡಿದರು. ಪವಿತ್ರ ಜಲದ ಆಶೀರ್ವಚನ ಹಾಗೂ ಕ್ರೈಸ್ತ ವಿಶ್ವಾಸ, ಸತ್ಯದ ಮರು ದೃಢೀಕರಣ ಈ ಸಂದರ್ಭ ನಡೆಯಿತು.

ಕ್ರೈಸ್ತ ಸಂತರನ್ನು ಸ್ಮರಿಸಿ ಅವರ ಶುಭಾಶೀರ್ವಾದ ಕೋರಲಾಯಿತು. ಸಂಭ್ರಮದ ಬಲಿ ಪೂಜೆ ಬಳಿಕ ಭಾಗವಹಿಸಿದ ಕ್ರೈಸ್ತ ಬಾಂಧವರು ಈಸ್ಟರ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News