ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ಮಾಡಿದ ನಾಟ್ಯ ಮಯೂರಿ ತನುಶ್ರೀ ಪಿತ್ರೋಡಿ

Update: 2019-04-20 17:07 GMT

ಮಂಗಳೂರು, ಎ.20: ಹತ್ತು ವರ್ಷಗಳ ಎಳೆಯ ಪ್ರತಿಭೆ ನಾಟ್ಯ ಮಯೂರಿ ತನುಶ್ರೀ ಪಿತ್ರೋಡಿಯು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ಸೇರಿಸುಂತಹ ಸಾಧನೆ ಮಾಡಿದ್ದಾಳೆ.

ತನ್ನ ಎಂಟನೇ ವಯಸ್ಸಿಗೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿ ತನ್ನ ಸಾಧನೆಯ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದ ತನುಶ್ರೀ, ಪ್ರಸಕ್ತ ಉಡುಪಿಯ ಸೈಂಟ್ ಸಿಸಿಅಸ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ.

ಮೂರರ ಹರೆಯದಲ್ಲಿ ಮಾಸ್ಟರ್ ಡ್ಯಾನ್ಸ್ ಗ್ರೂಪ್‌ನಲ್ಲಿ ನೃತ್ಯ ತರಭೇತಿ ಆರಂಭಿಸಿ ಮುದ್ದುಕೃಷ್ಣ ಸ್ಪರ್ಧೆ, ನೃತ್ಯ ಕಾರ್ಯಕ್ರಮವನ್ನು ನೀಡುವುದರ ಮೂಲಕ ಮನೆ ಮಾತಾಗಿದ್ದಳು. ಸ್ಪಂದನ ಟಿವಿ ವಾಹಿನಿ ನಡೆಸಿದ ರಿಯಾಲಿಟಿ ಶೋನಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ತನುಶ್ರೀ. ಕಲರ್ಸ್‌ ಕನ್ನಡ ವಾಹಿನಿಯ ಯಶಸ್ವಿ ಕಾರ್ಯಕ್ರಮ ಮಜಾ ಟಾಕೀಸ್‌ನ 150ನೇ ವಿಶೇಷ ಸಂಚಿಕೆಯಲ್ಲಿ ಮತ್ತು 2ನೇ ಸೂಪರ್ ಸಂಚಿಕೆಯಲ್ಲಿ ನೃತ್ಯ ಕಾರ್ಯಕ್ರಮ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಳು. ಪ್ರಸಕ್ತ ಅಕಾಡಮಿ ಆಫ್ ಮೂಸ್ಯಿಕ್ ಮತ್ತು ಫೈನ್ ಆರ್ಟ್ಸ್ ಮುಕುಂದಕೃಪಾದ ನೃತ್ಯ ಗುರು ರಾಮಕೃಷ್ಣ ಕೊಡಂಚರಿಂದ ಭರತನಾಟ್ಯ ತರಭೇತಿ ಪಡೆಯುತ್ತಿದ್ದಾಳೆ. ಮೂರನೇ ವಯಸ್ಸಿನಲ್ಲೇ ನೃತ್ಯ ಹಾಗೂ ಸ್ಟಂಟ್ ಮಾಡುವುದರಲ್ಲಿ ನಿಪುಣಳಾಗಿದ್ದ ತನುಶ್ರೀ, ಯೋಗಾಸನದಲ್ಲಿಯೂ ಆಸಕ್ತಿ ಬೆಳೆಸಿಕೊಂಡಳು.

ತನ್ನ ಎಂಟನೇ ವಯಸ್ಸಿಗೆ ನೀರಾಲಂಭ ಪೂರ್ಣ ಚಕ್ರಾಸನ ಎಂಬ ಕಠಿಣ ಯೋಗವನ್ನು ಒಂದು ನಿಮಿಷದಲ್ಲಿ 19 ಬಾರಿ ಮಾಡಿ ಪ್ರಥಮ ವಿಶ್ವ ದಾಖಲೆ ಮಾಡಿರುವ ಆಕೆ, 9ನೇ ಹರೆಯದಲ್ಲಿ ಪಿತ್ರೋಡಿ ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ಸ್‌ನ ನೇತೃತ್ವದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ‘ಮೋಸ್ಟ್ ಬಾಡಿ ರೆವಲ್ಯೂಷನ್ ಮೈಂಟೇನಿಂಗ್ ಅ ಚೆಸ್ಟ್ ಸ್ಟಾಂಡ್ ಪೊಸಿಷನ್’ ಯೋಗಾಸನ ಭಂಗಿಯನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ದ್ವತೀಯ ವಿಶ್ವ ದಾಖಲೆ ಮಾಡಿರುವ ತನುಶ್ರೀ, 2019ರ ಫೆ.23ರಂದು ಧನುರಾಸನ ಎಂಬ ಯೋಗಾಸನದ ಭಂಗಿಯನ್ನು 61 ಬಾರಿ ರೋಲ್ ಮಾಡುವುರ ಮೂಲಕ 3ನೇ ವಿಶ್ವ ಧಾಖಲೆ ಮಾಡಿದ್ದಾಳೆ. ಇದೇ ಸಂದರ್ಭ ಮತ್ತೊಂದು ಸವಾಲು ಸ್ವೀಕರಿಸಿ ಧನುರಾಸನ ಭಂಗಿಯನ್ನು 96 ಬಾರಿ ಒಂದು ನಿಮಿಷ ಮತ್ತು 40 ಸೆಕೆಂಡುಗಳಲ್ಲಿ ಮಾಡಿ ಮುಗಿಸಿ, ದಾಖಲೆ ನಿರ್ಮಿಸಿರುವ ತನುಶ್ರೀ, ಉದಯಕುಮಾರ್ ಮತ್ತು ಸಂಧ್ಯಾ ದಂಪತಿ ಪುತ್ರಿಯಾಗಿದ್ದು, ರೀತುಶ್ರೀ ಸಹೋದರಿಯಾಗಿದ್ದಾಳೆ.

 ಬೆಂಗಳೂರಿಗೆ ಹೋಗಿದ್ದಾಗ ಕಂಡ ಪತ್ರಿಕಾ ವರದಿಯೊಂದರಲ್ಲಿ ಮೈಸೂರಿನ ಖುಷಿ ಎಂಬವರು ಯೋಗಾಸನದ ಒಂದು ಭಂಗಿಯನ್ನು ಒಂದು ನಿಮಿಷದಲ್ಲಿ 18 ಬಾರಿ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದ ಬಗ್ಗೆ ವರದಿಯಾಗಿತ್ತು. ನಾನು ಮನೆಗೆ ಹಿಂತಿರುಗಿದ ನಂತರ ಪ್ರಯತ್ನಸಿದೆ ನನಗೆ 9 ಬಾರಿ ಮಾತ್ರ ಸಾಧ್ಯವಾಯಿತು. ಸತತ ಪ್ರಯತ್ನದ ಫಲವಾಗಿ ನನಗೆ 19 ಬಾರಿ ಒಂದು ನಿಮಿಷದಲ್ಲಿ ಮಾಡಿ ಅವರ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಯಿತು. ಇದೇ ನನ್ನ ಮೊದಲನೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಸಹಾಯವಾಯಿತು.

13ನೇ ವಯಸ್ಸಿನ ಫ್ಯಾಲಸ್ತೀನ್‌ನ ಮುಹಮ್ಮದ್ ಅಲಿ ಶೇಕ್ ಯೋಗಾಸನ ಭಂಗಿಯನ್ನು ಒಂದು ನಿಮಿಷದಲ್ಲಿ 38 ಬಾರಿ ಮಾಡುವುದರ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದ್ದರು. ನಾನು 42 ಬಾರಿ ಮಾಡುವ ಮೂಲಕ ಈ ರೆಕಾರ್ಡ್ ಬ್ರೇಕ್ ಮಾಡಿದೆ. ಮತ್ತೊಂದು ಖುಷಿಯ ಸಂಗತಿಯೆಂದರೆ 3ನೇ ನನ್ನ ರೆಕಾರ್ಡ್‌ನ್ನು ಇಲ್ಲಿಯವರೆಗೆ ಯಾರೂ ಮುರಿಯಲು ಸಾಧ್ಯವಾಗಿಲ್ಲ.

''ತನುಶ್ರೀಯ ಸಾಧನೆಯನ್ನ ಯಾವ ಸಂದರ್ಭದಲ್ಲಿಯೂ ನಿಲ್ಲಿಸದೆ ಹೆಮ್ಮರವಾಗುವಂತೆ ಬೆಳೆಸುವುದು ನನ್ನ ಉದ್ದೇಶವಾಗಿದೆ. ಈ ಗಿನ್ನಸ್ ವಿಶ್ವ ದಾಖಲೆ ಮಾಡಲು ನಾನು ಸುಮಾರು 6.30ರಿಂದ 7 ಲಕ್ಷ ರೂ. ವರಗೆ ಸ್ವಂತ ಖರ್ಚು ಮಾಡಿದ್ದು, ಸರಕಾರದಿಂದ ಯಾವುದೇ ಸಹಕಾರ ದೊರಕದಿರುವುದು ಬಹಳ ಬೇಸರ ತಂದಿದೆ. ಯಾರಾದರೂ ಅಧಿಕಾರಿಗಳನ್ನು ಭೇಟಿಯಾಗಿ ಈ ಬಗ್ಗೆ ವಿವರಿಸಿದರೆ ಭಾರತದಲ್ಲಿ ಯೋಗಕ್ಕೆ ಅಷ್ಟು ಮಾನ್ಯತೆಯಿಲ್ಲ ಎಂದು ಹೇಳಿ ಸುಮ್ಮನಾಗುತ್ತಾರೆ''
-ಉದಯ್ ಕುಮಾರ್, ತನುಶ್ರೀ ತಂದೆ

Writer - ಚೇತನ ನಾಯಕ್ ಕೆ.

contributor

Editor - ಚೇತನ ನಾಯಕ್ ಕೆ.

contributor

Similar News