ಮಂಗಳೂರು: ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ

Update: 2019-04-20 17:15 GMT

ಮಂಗಳೂರು, ಎ. 20: ಏಸು ಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್‌ನ್ನು ಕ್ರೈಸ್ತರು ರವಿವಾರ (ಎ.21) ಆಚರಿಸಲಿದ್ದು, ಅದರ ಪೂರ್ವಭಾವಿಯಾಗಿ ಶನಿವಾರ ರಾತ್ರಿ ನಗರದ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ವಿಶೇಷ ಪ್ರಾರ್ಥನೆ ಮತ್ತು ಸಂಭ್ರಮದ ಬಲಿಪೂಜೆ ನೆರವೇರಿಸಲಾಯಿತು.

ಮಂಗಳೂರಿನ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬಿಷಪ್ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹೊಸ ಅಗ್ನಿಯನ್ನು ಆಶೀರ್ವಚನ ಮಾಡಿ ಈಸ್ಟರ್ ಮೊಂಬತ್ತಿಯನ್ನು ಉರಿಸಿದರು. ಕೆಥಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಮತ್ತಿತರ ಗುರುಗಳು ಉಪಸ್ಥಿತರಿದ್ದರು.

ಭಾಗವಹಿಸಿದ್ದ ಕ್ರೈಸ್ತ ವಿಶ್ವಾಸಿಗಳೆಲ್ಲರೂ ಈಸ್ಟರ್ ಮೊಂಬತ್ತಿಯ ಅಗ್ನಿಯಿಂದ ಮೇಣದ ಬತ್ತಿ ಉರಿಸಿ ಮೆರವಣಿಗೆಯಲ್ಲಿ ಕೆಥೆಡ್ರಲ್‌ನ ಒಳ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಬಲಿಪೂಜೆಯಲ್ಲಿ ಪಾಲ್ಗೊಂಡರು. ಬಲಿಪೂಜೆಯ ಸಂದರ್ಭ ಬಿಷಪ್ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಈಸ್ಟರ್ ಆಚರಣೆಯ ಮಹತ್ವ ವನ್ನು ವಿವರಿಸಿ ಹಬ್ಬದ ಸಂದೇಶ ನೀಡಿದರು.

ಧರ್ಮಪ್ರಾಂತದ ಎಲ್ಲಾ ಚರ್ಚ್‌ಗಳಲ್ಲಿ ಮತ್ತು ಪ್ರಾರ್ಥನಾ ಮಂದಿರಗಳಲ್ಲಿ ಶನಿವಾರ ರಾತ್ರಿ ಈಸ್ಟರ್ ಜಾಗರಣೆ ಕಾರ್ಯಕ್ರಮಗಳು ಜರುಗಿದ್ದು, ಆಯಾ ಚರ್ಚ್ ಧರ್ಮಗುರುಗಳು ನೇತೃತ್ವ ವಹಿಸಿದ್ದರು. ಬಲಿ ಪೂಜೆಯ ಬಳಿಕ ಕ್ರೈಸ್ತರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಸಂವಿಧಾನದ ಕೊಂಕಣಿ ಭಾಷಾಂತರ ಕೃತಿ ಬಿಡುಗಡೆ

ರೊಜಾರಿಯೊ ಕೆಥಡ್ರಲ್‌ನಲ್ಲಿ ಈಸ್ಟರ್ ಬಲಿಪೂಜೆಯ ಬಳಿಕ ಭಾರತದ ಸಂವಿಧಾನದ ಕೊಂಕಣಿ ಭಾಷಾಂತರ ಕೃತಿಯನ್ನು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಬಿಡುಗಡೆಗೊಳಿಸಿದರು. ಸಂವಿಧಾನವನ್ನು ಕೊಂಕಣಿಗೆ ಭಾಷಾಂತರಿಸಿದ ಪುತ್ತೂರು ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಸ್ಟೀನ್ ಕ್ವಾಡ್ರಸ್ ಪೆರ್ಮುದೆ ಮತ್ತವರ ಪತ್ನಿ ಗ್ಲ್ಯಾಡಿಸ್ ಕ್ವಾಡ್ರಸ್, ಕೃತಿಯನ್ನು ಪ್ರಕಟಿಸಿದ ಮಂಗಳೂರು ಧರ್ಮ ಪ್ರಾಂತದ ಶ್ರೀಸಾಮಾನ್ಯರ ಆಯೋಗದ ನಿರ್ದೇಶಕ ಫಾ. ಜೆ .ಬಿ. ಕ್ರಾಸ್ತಾ, ಸದಸ್ಯ ಸುಶಿಲ್ ನೊರೋನ್ಹಾ ಮುಂತಾದವರು ಉಪಸ್ಥಿತರಿದ್ದರು.

ಈ ಗ್ರಂಥವು ಭಾರತದ ಪ್ರಜೆಗಳಾಗಿ ನಾವು ನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಮತ್ತು ನಮಗಿರುವ ಹಕ್ಕುಗಳನ್ನು ತಿಳಿದುಕೊಳ್ಳಲು ಜನ ಸಾಮಾನ್ಯರಿಗೆ ನೆರವಾಗಲಿದೆ. ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಿ ಸನ್ಮಾರ್ಗದಲ್ಲಿ ನಡೆಯಲು ಇದರಿಂದ ಪ್ರಯೋಜನ ಆಗಲಿ ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ ಹಾರೈಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News