ಗೆಲುವಿನ ಶಿಖರವೇರಿದ ಡೆಲ್ಲಿ

Update: 2019-04-20 18:41 GMT

ಹೊಸದಿಲ್ಲಿ, ಎ.20: ಇಲ್ಲಿನ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ 37ನೇ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಿಂಗ್ಸ್ ಇಲೆವನ್ ಪಂಜಾಬ್‌ನ್ನು 5 ವಿಕೆಟ್‌ಗಳಿಂದ ಮಣ್ಣುಮುಕ್ಕಿಸಿತು.

ಪಂಜಾಬ್ ನೀಡಿದ 164 ರನ್ ಗುರಿ ಬೆನ್ನಟ್ಟಿದ ಡೆಲ್ಲಿ 19.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ಜಯದ ತೋರಣ ಕಟ್ಟಿತು.

ಡೆಲ್ಲಿ ಪರ ಆರಂಭಿಕ ಆಟಗಾರ ಪೃಥ್ವಿ ಶಾ (13, 11 ಎಸೆತ, 1 ಬೌಂಡರಿ, 1 ಸಿಕ್ಸರ್) ಶೀಘ್ರ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಶಿಖರ್ ಧವನ್ (56, 41 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (ಅಜೇಯ 58, 49 ಎಸೆತ, 5 ಬೌಂಡರಿ, 1 ಸಿಕ್ಸರ್) ಎರಡನೇ ವಿಕೆಟ್‌ಗೆ 92 ರನ್ ಸೇರಿಸಿದರು. ಧವನ್ ಅವರು ಹರ್ದುಸ್ ವಿಲ್‌ಜೊಯಿನ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಕ್ರೀಸ್‌ಗೆ ಆಗಮಿಸಿದ ರಿಷಭ್ ಪಂತ್ (6) ಮಿಂಚಲಿಲ್ಲ. ಕಾಲಿನ್ ಇನ್‌ಗ್ರಾಮ್ ೧೯ ರನ್ ಗಳಿಸಿ ಔಟಾದರು. ಕೊನೆಗೆ ಶೆರ್ಫೆನ್ ಹಾಗೂ ಅಯ್ಯರ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತು.

ತಂಡದ ಪರ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ದೈತ್ಯ ಕ್ರಿಸ್ ಗೇಲ್ (69, 37 ಎಸೆತ, 6 ಬೌಂಡರಿ, 5 ಸಿಕ್ಸರ್) ಹಾಗೂ ಕೆ.ಎಲ್.ರಾಹುಲ್ (12) ಪಂಜಾಬ್‌ಗೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ರಾಹುಲ್, ಮಾಯಾಂಕ್ ಅಗರ್ವಾಲ್ (2) ಹಾಗೂ ಡೇವಿಡ್ ಮಿಲ್ಲರ್ (7) ಶೀಘ್ರ ವಿಕೆಟ್ ಒಪ್ಪಿಸಿದರು.

ಮಂದೀಪ್‌ಸಿಂಗ್ (30, 27 ಎಸೆತ, 1 ಬೌಂಡರಿ, 1 ಸಿಕ್ಸರ್) ಹಾಗೂ ಗೇಲ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ೪೫ ರನ್ ಸೇರಿಸಿದರು. ಗೇಲ್ ವಿಕೆಟ್ ಪತನದ ಬಳಿಕ ಬಂದ ಸ್ಯಾಮ್ ಕರನ್ ಸೊನ್ನೆ ಸುತ್ತಿದರು. ಕೊನೆಯಲ್ಲಿ ನಾಯಕ ರವಿಚಂದ್ರನ್ ಅಶ್ವಿನ್ (16) ಹಾಗೂ ಹರ್‌ಪ್ರೀತ್ ಬ್ರಾರ್ (ಅಜೇಯ 20)ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಡೆಲ್ಲಿ ಪರ ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ಸಂದೀಪ್ ಲ್ಯಾಮಿಚಾನೆ 40 ರನ್ ನೀಡಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News