ರಸ್ತೆ ಅಪಘಾತ: ಸುನ್ನಿ ಸೆಂಟರ್ ಉಪಪ್ರಾಂಶುಪಾಲ ಮೃತ್ಯು

Update: 2019-04-21 16:20 GMT

ಗಂಗೊಳ್ಳಿ, ಎ. 21: ತ್ರಾಸಿಯಲ್ಲಿರುವ ಗಂಗೊಳ್ಳಿ ಪೊಲೀಸ್ ಠಾಣೆಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಬೊಲೆರೋ ಜೀಪು ಹಾಗೂ ದ್ವಿಚಕ್ರ ವಾಹನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಜೀಪಿನಲ್ಲಿದ್ದ ಮೂಳೂರು ಸುನ್ನೀ ಸೆಂಟರ್ ದಅವಾ ವಿಭಾಗದ ಉಪಪ್ರಾಂಶುಪಾಲ ಮೃತಪಟ್ಟು, ಐವರು ಗಾಯಗೊಂಡಿರುವ ಬಗ್ಗೆ ವರದಿ ಯಾಗಿದೆ.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧೀನ ಸಂಸ್ಥೆಯಾಗಿರುವ ಮೂಳೂರಿನ ಅಲ್ ಇಹ್ಸಾನ್ ಏಜ್ಯುಕೇಶನ್ ಸೆಂಟರ್‌ನ ದಅವಾ ವಿಭಾಗದ ಉಪಪ್ರಾಂಶು ಪಾಲ ಸುಹೈಲ್ ಸಅದಿ (28) ಮೃತರು ಎಂದು ಗುರುತಿಸಲಾಗಿದೆ. ಕೇರಳ ಕಣ್ಣೂರಿನ ಪಯ್ಯನ್ನೂರಿನ ಅರಿಪ್ಪಾಂಬ್ರ ಮುಕ್ಕಿಲ್ ನಿವಾಸಿಯಾಗಿದ್ದ ಇವರು ಲೆಕ್ಕಶಾಸ್ತ್ರ ವ್ಯವಹಾರ ಅಧ್ಯಯನ ಉಪನ್ಯಾಸಕರಾಗಿದ್ದರು.

ಜೀಪಿನಲ್ಲಿದ್ದ ದಅವಾ ವಿಭಾಗದ ಪ್ರಾಂಶುಪಾಲ ಸ್ವಾಬಿರ್ ಸಅದಿ (28) ಹಾಗೂ ಭಟ್ಕಳದ ಮಂಜುನಾಥ್ ದೇವಾಡಿಗ ಎಂಬವರ ಮಗ ದ್ವಿಚಕ್ರವಾಹನ ಸವಾರ ಭರತ್ ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದೇ ರೀತಿ ಸಣ್ಣ ಪುಟ್ಟ ಗಾಯಗೊಂಡ ಜೀಪಿನಲ್ಲಿದ್ದ ಇಂಗ್ಲಿಷ್ ಉಪನ್ಯಾಸಕ ಮಂಜನಾಡಿಯ ಇಬ್ರಾಹಿಂ ಬಾತಿಶಾ ಮಣಿಪಾಲ ಆಸ್ಪತ್ರೆಯಲ್ಲಿ, ವಿದ್ಯಾರ್ಥಿ ತುಫೈಲ್ ಹಾಗೂ ದ್ವಿಚಕ್ರ ವಾಹನ ಹಿಂಬದಿ ಸವಾರ ಜಡ್ಕಲ್‌ನ ಜೋಸೆಫ್ ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೀಪಿನಲ್ಲಿದ್ದ ವಿದ್ಯಾರ್ಥಿ ಅಜ್ಮಲ್ ಹಾಗೂ ಚಾಲಕ ಕಾಪು ಮಜೂರಿನ ಮುಹಮ್ಮದ್ ರಫೀಕ್ ಎಂಬವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿಗಾಗಿ ದಾವಣಗೆರೆಗೆ ತೆರಳಿದ್ದರು

ಅಲ್ ಇಹ್ಸಾನ್ ದಅವಾ ವಿಭಾಗದ ವಿದ್ಯಾರ್ಥಿ ದಾವಣಗೆರೆಯ ಮುಹಮ್ಮದ್ ನಿಯಾದ್ ಎಂಬವರ ತಾಯಿ ಎ. 20ರಂದು ಸಂಜೆ ವೇಳೆ ಹೃದಯಾ ಘಾತದಿಂದ ನಿಧನರಾಗಿದ್ದರು. ಈ ವಿಚಾರ ತಿಳಿದು ನಿಯಾದ್‌ರನ್ನು ಕರೆದುಕೊಂಡು ಸಂಸ್ಥೆಯ ಬೊಲೇರೊ ಜೀಪಿನಲ್ಲಿ ಇವರೆಲ್ಲರು ದಾವಣಗೆರೆಗೆ ತೆರಳಿ ದ್ದರು. ಇಂದು ಬೆಳಗಿನ ಜಾವ ದಾವಣಗೆರೆಯಿಂದ ಮೂಳೂರಿಗೆ ಹೊರಟ ಜೀಪು ಬೈಂದೂರು ಕಡೆಯಿಂದ ಕುಂದಾಪುರ ಕಡೆ ಬರುತ್ತಿದ್ದಾಗ ಎದುರಿನಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಇದರ ಪರಿಣಾಮ ನಿಯಂತ್ರಣ ತಪ್ಪಿದ ಜೀಪು ರಸ್ತೆ ಮಧ್ಯೆ ಪಲ್ಟಿಯಾಯಿತು. ಇದರಿಂದ ಜೀಪಿನ ಮಧ್ಯ ಸೀಟಿನಲ್ಲಿ ಕುಳಿತಿದ್ದ ಸುಹೈಲ್ ಸಅದಿ ಗಂಭೀರವಾಗಿ ಗಾಯಗೊಂಡು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಸುಹೈಲ್ ಸಅದಿ ದಅವಾ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಉಪನ್ಯಾಸಕರಾಗಿ ದುಡಿಯುತ್ತಿದ್ದರು. ಎರಡೂವರೆ ವರ್ಷಗಳ ಹಿಂದೆ ವಿವಾಹವಾದ ಇವರು ಪತ್ನಿ ಹಾಗೂ ಒಂದು ವರ್ಷದ ಮಗುವನ್ನು ಅಗಲಿದ್ದಾರೆ. ಮೃತದೇಹದ ಮಯ್ಯತ್ ನಮಾಝ್‌ನ್ನು ಸಂಜೆ ಕುಂದಾಪುರದ ಹಂಗ್ಳೂರು ಮಸೀದಿಯಲ್ಲಿ ನಿರ್ವಹಿಸಿ ಬಳಿಕ ಮೂಳೂರು ಸುನ್ನಿ ಸೆಂಟರ್‌ನಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮೃತದೇಹವನ್ನು ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತಾಪ:  ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಜಿಲ್ಲಾ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಅಸ್ಯಯದ್ ಜಅಫರ್ ತಂಙಳ್ ಕೋಟೇಶ್ವರ, ಸುನ್ನಿ ಸೆಂಟರ್‌ನ ಕಾರ್ಯಾಧ್ಯಕ್ಷ ಹಾಸಿಂ ಕಂಚಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಕೋಶಾಧಿಕಾರಿ ಹನೀಫ್ ಸುಳ್ಯ, ಮೆನೇಜರ್ ಮುಸ್ತಫಾ ಸಅದಿ, ಮರ್ಕಝ್ ಉಪಾಧ್ಯಕ್ಷ ಬದ್ರುದ್ದೀನ್ ಬಜ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವಿಟ್ಲ, ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯ, ಅಬ್ದುಲ್ ಖಾದರ್ ಮದನಿ ಪಲ್ಲಂಗೋಡು, ಅಬ್ದುಲ್ಲಾ ಮುಸ್ಲಿಯಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಪಘಾತ ಸಂಭವಿಸಿದ ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಜೀವರಕ್ಷಕ ಹಾಗೂ ಆಪತ್ಬಾಂಧವ ಅಂಬ್ಯಲೆನ್ಸ್ ಚಾಲಕರಾದ ಅಕ್ಷಯ ಖಾರ್ವಿ ಹಾಗೂ ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಗಾಯಳು ಭರತ್‌ರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿ ಸಲು ಅಂಬುಲೆನ್ಸ್ ಚಾಲಕ ಅಕ್ಷಯ ಖಾರ್ವಿಗೆ ಸಾಥ್ ನೀಡಿದ ಕುಂದಾಪುರ ಚರ್ಚ್ ರೋಡ್ ನಿವಾಸಿ ದೇವಿಪ್ರಸಾದ್ ಗಾಯಾಳುವಿನ ಮುತುವರ್ಜಿ ವಹಿಸುವ ಮೂಲಕ ಮಾನವೀಯತೆ ಮೆರೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News