ರಕ್ತದಾನ ಮಾಡಿ ತಾಯಿ-ಮಗುವಿನ ಜೀವ ಉಳಿಸಿದ ಸಿಆರ್‌ಪಿಎಫ್ ಯೋಧ

Update: 2019-04-21 08:25 GMT

ಶ್ರೀನಗರ, ಎ.21: ಕೇಂದ್ರ ಮೀಸಲು ಪೊಲೀಸ್ ಪಡೆ( ಸಿಆರ್‌ಪಿಎಫ್)ಯೋಧನೊಬ್ಬ ಜಮ್ಮು-ಕಾಶ್ಮೀರದಲ್ಲಿ ತನ್ನ ಕರ್ತವ್ಯವನ್ನು ಮೀರಿ ಸ್ಥಳೀಯ ಮಹಿಳೆ ಹಾಗೂ ಆಕೆಯ ಮಗುವಿನ ಜೀವ ಉಳಿಸಿ ಎಲ್ಲರ ಶ್ಲಾಘನೆಗೆ ಒಳಗಾಗಿದ್ದಾರೆ.

25ರ ಹರೆಯದ ಮಹಿಳೆ ಹೆರಿಗೆ ವೇಳೆ ತೀವ್ರ ತೊಂದರೆಗೆ ಸಿಲುಕಿದ್ದು, ಸಾಕಷ್ಟು ರಕ್ತಸ್ರಾವವಾಗಿತ್ತು. 53 ಬೆಟಾಲಿಯನ್‌ನ ಯೋಧ ಗೋಹಿಲ್ ಶೈಲೇಶ್ ತನ್ನ ರಕ್ತವನ್ನು ಮಹಿಳೆಗೆ ದಾನ ಮಾಡಿ ತಾಯಿ-ಮಗುವಿನ ಜೀವದಾನ ನೀಡಿದ್ದಾರೆ.

ಗುಲ್ಶನ್ ನಿವಾಸಿಯಾದ ಮಹಿಳೆಯ ಕುಟುಂಬದವರು ಸಹಾಯಕ್ಕಾಗಿ ಸಿಆರ್‌ಪಿಎಫ್‌ನ ಸಹಾಯವಾಣಿಯ ಮೊರೆ ಹೋಗಿದ್ದರು. ಕಾಶ್ಮೀರದ ಜನತೆ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸಿದರೆ ಈ ಸಹಾಯವಾಣಿ ಬಳಸಲು ಸೂಚಿಸಲಾಗಿದೆ. ಸಿಆರ್‌ಪಿಎಫ್ ಈ ಸಹಾಯವಾಣಿಯನ್ನು ನಿಭಾಯಿಸುತ್ತಿದೆ.

ಸಿಆರ್‌ಪಿಎಫ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ, ಮಾನವೀಯತೆ ಮೆರೆದ ಸಿಆರ್‌ಪಿಎಫ್ ಕಾನ್ ್ಸಸ್ಟೇಬಲ್ ಹಾಗೂ ನವಜಾತ ಶಿಶು ಹಾಗೂ ಹೆತ್ತ ತಾಯಿಯ ಫೋಟೊಗಳನ್ನು ಹಾಕಿದ್ದು, ‘‘ಈತನ ರಕ್ತ ತಾಯಿ, ಮಗು ಹಾಗೂ ಕುಟುಂಬದ ಜೀವ ಉಳಿಸಿದೆ. ಜೀವನದ ಒಂದು ಬಂಧ ನಿರ್ಮಿಸಿದೆ’ ’ಎಂದು ಟ್ವೀಟ್ ಮಾಡಲಾಗಿದೆ.

ವೈರಲ್ ಆಗಿರುವ ಈ ಚಿತ್ರ ನೋಡಿ ಸಿಆರ್‌ಪಿಎಫ್‌ನ ಕಾರ್ಯವನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.

 ಸಿಆರ್‌ಪಿಎಫ್ 2017ರ ಜೂ.16ರಂದು ಸಹಾಯವಾಣಿ ಘಟಕವನ್ನು ಸ್ಥಾಪಿಸಿದ್ದು, ವಾರದ 24 ಗಂಟೆ ಕಾರ್ಯನಿರ್ವಹಿಸುವ ಈ ಸಹಾಯವಾಣಿ ಸಂಕಷ್ಟದಲ್ಲಿರುವ ಕಣಿವೆ ರಾಜ್ಯದ ಜನರಿಗೆ ಅಗತ್ಯದ ನೆರವು ನೀಡುತ್ತದೆ. ಫೆ.19ರಲ್ಲಿ ಇದು ಸ್ಥಾಪನೆಯಾದ ಬಳಿಕ 3.45 ಲಕ್ಷ ಕರೆಗಳು ಬಂದಿವೆ. ಸಹಾಯವಾಣಿ ಘಟಕ ಕಾಶ್ಮೀರ ನಾಗರಿಕರಿಗೆ ಹವಾಮಾನ, ಟ್ರಾಫಿಕ್, ಸಂಚಾರ ನಿರ್ಬಂಧ, ಪರಿಹಾರ ಕಾರ್ಯಾಚರಣೆ, ಆಪ್ತ ಸಮಾಲೋಚನೆ ಹಾಗೂ ಉದ್ಯೋಗದ ಅವಕಾಶದ ಮಾಹಿತಿಯನ್ನು ನೀಡುತ್ತದೆ. ಕಣಿವೆ ರಾಜ್ಯ ಹಾಗೂ ಇತರ ರಾಜ್ಯಗಳಲ್ಲಿ ನೆಲೆಸಿರುವ ಜನರ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News