ಯಕ್ಷಗಾನ ಮಕ್ಕಳ ಆರೋಗ್ಯಕ್ಕೆ ಪೂರಕವಾದ ಕಲೆ: ಡಾ.ವಿಜಯ ಬಲ್ಲಾಳ್

Update: 2019-04-21 14:33 GMT

ಉಡುಪಿ, ಎ.21: ಯಕ್ಷಗಾನ ನಮ್ಮ ನೆಲದ ಸರ್ವಾಂಗ ಸುಂದರ ಕಲೆ. ಇದು ಮಕ್ಕಳ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕವಾಗಿರುವ ಕಲಾ ಸಂಪತ್ತು ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಹೇಳಿದ್ದಾರೆ.

ಅಂಬಲಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ವತಿ ಯಿಂದ ರವಿವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ನಡೆದ 11 ದಿನಗಳ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಶಿಬಿರದ ನಿರ್ದೇಶಕ ಕೆ.ಜೆ.ಕೃಷ್ಣರನ್ನು ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ದೇವಳದ ಪ್ರಸಾದ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯ ಅತಿಥಿಗಳಾಗಿ ನಿಯೋಜಿತ ಲಯನ್ಸ್ ಗವರ್ನರ್ ವಿ.ಜಿ.ಶೆಟ್ಟಿ ಹಾಗೂ ಉದ್ಯಮಿ ಯು.ವಿಶ್ವನಾಥ ಶೆಣೈ ಶುಭಹಾರೈಸಿದರು.

ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಸ್ವಾಗತಿಸಿದರು. ಕೋಶಾಧಿಕಾರಿ ಎ.ನಟರಾಜ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕೆ.ಜೆ ಕೃಷ್ಣ ವಂದಿಸಿದರು. ಉಪಾಧ್ಯಕ್ಷ ಕೆ.ಅಜಿತ್ ಕುಮಾರ್ ಉಪಸ್ಥಿತರಿದ್ದರು. ಬಳಿಕ ಶಿಬಿರಾರ್ಥಿಗಳಿಂದ ಪ್ರಾತ್ಯಕ್ಷಿತೆ ಜರಗಿತು. ಶಿಬಿರದಲ್ಲಿ ಒಟ್ಟು 80 ವಿದ್ಯಾರ್ಥಿ ಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News