ಎ. 22ರಂದು ಪುತ್ತಿಗೆಶ್ರೀಯಿಂದ ಶಿಷ್ಯ ಸ್ವೀಕಾರ: ಉಡುಪಿಯ ಪ್ರಶಾಂತ್ ಆಚಾರ್ಯಗೆ ಸನ್ಯಾಸ ದೀಕ್ಷೆ

Update: 2019-04-21 14:54 GMT

ಉಡುಪಿ, ಎ.21: ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಕುಂಜಿಬೆಟ್ಟಿನ ಪ್ರಶಾಂತ ಆಚಾರ್ಯ ಎಂಬ ವಟುವನ್ನು ಶ್ರೀಸುಗುಣೇಂದ್ರ ತೀರ್ಥರು ಸೋಮವಾರ ಸ್ವೀಕರಿಸಲಿದ್ದಾರೆ.

ಹಿರಿಯಡ್ಕ ಬಳಿ ಇರುವ ಪುತ್ತಿಗೆ ಮೂಲಮಠದಲ್ಲಿ ಕಳೆದ ಎರಡು ದಿನಗಳಿಂದ ಶಿಷ್ಯ ಸ್ವೀಕಾರಕ್ಕೆ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದಿದ್ದು, ಸೋಮವಾರ ಬೆಳಗ್ಗೆ 11:45ಕ್ಕೆ ಅಧಿಕೃತ ವಾಗಿ ಶಿಷ್ಯ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಸುಮಾರು 750 ವರ್ಷಗಳ ಹಿಂದೆ ಶ್ರೀಮಧ್ವಾಚಾರ್ಯರು ತಾವು ಉಡುಪಿ ಯಲ್ಲಿ ಸ್ಥಾಪಿಸಿದ ಅಷ್ಟ ಮಠಗಳಲ್ಲಿ ಒಂದಾಗ ಪುತ್ತಿಗೆ ಮಠಕ್ಕೆ ತಮ್ಮ ಶಿಷ್ಯರಾದ ಶ್ರೀಉಪೇಂದ್ರ ತೀರ್ಥರನ್ನು ಮೊದಲ ಮಠಾಧೀಶರಾಗಿ ನೇಮಿಸಿದ್ದರು. ಈ ಗುರುಪರಂಪರೆಯಲ್ಲಿ ಈಗಿನ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥರು 29ನೇ ಯತಿಗಳಾಗಿದ್ದು, 30ನೇ ಯತಿಗೆ ಉತ್ತರಾಧಿಕಾರಿ ಪಟ್ಟ ನೀಡಲಿದ್ದಾರೆ.

1962ರಲ್ಲಿ ಜನಿಸಿದ ಶ್ರೀಸುಗುಣೇಂದ್ರತೀರ್ಥರು, 1974ರಲ್ಲಿ ಬಾಲಸನ್ಯಾಸ ದೀಕ್ಷೆ ಸ್ವೀಕರಿಸಿದ್ದು, ಸೋಮವಾರ ಸನ್ಯಾಸಾಶ್ರಮದ 45 ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪ್ರಶಾಂತ ಆಚಾರ್ಯ ಎಂಬ ವಟುವನ್ನು ತನ್ನ ಶಿಷ್ಯರನ್ನಾಗಿ ಸ್ವೀಕರಿಸಲಿದ್ದಾರೆ. ದೇಶವಿದೇಶಗಳಲ್ಲಿ ಧರ್ಮಪ್ರಚಾರ ಮಾಡುವ ಪುತ್ತಿಗೆಶ್ರೀಗಳು ವಿಶ್ವದಾದ್ಯಂತ ಶಿಷ್ಯರು, ಭಕ್ತರು ಅನುಯಾಯಿಗಳು ಹಾಗೂ ಅಭಿಮಾನಿಗಳನ್ನು ಹೊಂದಿದ್ದಾರೆ.

ಪುತ್ತಿಗೆ ಮಠದ 30ನೇ ಯತಿಯಾಗಿ ದೀಕ್ಷೆ ಸ್ವೀಕರಿಸುವ ಪ್ರಶಾಂತ ಆಚಾರ್ಯ 27 ವರ್ಷ ಪ್ರಾಯದ ಇಂಜಿನಿಯರಿಂಗ್ ಪದವೀಧರರಾಗಿದ್ದು, ಸಂಸ್ಕೃತದ ಜ್ಞಾನವನ್ನು ಹೊಂದಿದ್ದಾರೆ. ಉಡುಪಿ ಕುಂಜಿಬೆಟ್ಟಿನ ಗುರುರಾಜ ಆಚಾರ್ಯ ಹಾಗೂ ವಿನುತಾ ಆಚಾರ್ಯರ ಪುತ್ರರಾದ ಇವರಿಗೆ ಬಾಲ್ಯದಿಂದಲೂ ಆಧ್ಯಾತ್ಮದ ಒಲವನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.

ಅಷ್ಟಮಠಗಳ ಪೀಠಾಧಿಪತಿಗಳಿಗೆ ನಿಷಿದ್ಧವಾಗಿರುವ ವಿದೇಶ ಯಾನವನ್ನು ಕೈಗೊಂಡ ಬಳಿಕ ಉಳಿದ ಕೆಲ ಸ್ವಾಮೀಜಿಗಳ ವಿರೋಧಕ್ಕೆ ತುತ್ತಾಗಿರುವ ಪುತ್ತಿಗೆ ಶ್ರೀಗಳು, ಇದೀಗ ತಾವೇ ಸ್ವಯಂ ಶಿಷ್ಯ ಸ್ವೀಕಾರಕ್ಕೆ ಮುಂದಾಗಿರುವುದಕ್ಕೆ ಅವರ ಪ್ರತಿಕ್ರಿಯೆ ಇನ್ನಷ್ಟೇ ಗೊತ್ತಾಗಬೇಕಾಗಿದೆ.

ಪೇಜಾವರಶ್ರೀ ಪ್ರತಿಕ್ರಿಯೆ

 ಪುತ್ತಿಗೆಶ್ರೀಗಳ ಶಿಷ್ಯಸ್ವೀಕಾರ ಕುರಿತು ತಮಗೆ ಶನಿವಾರವಷ್ಟೇ ಗೊತ್ತಾಗಿದ್ದು, ಈ ಬಗ್ಗೆ ಮಠದಿಂದ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News