ಲೈಂಗಿಕ ಕಿರುಕುಳ ಆರೋಪ: ಸಿಜೆಐಯನ್ನು ಸಮರ್ಥಿಸಿದ ಅರುಣ್ ಜೇಟ್ಲಿ ಹೇಳಿದ್ದೇನು?

Update: 2019-04-21 16:48 GMT

ಹೊಸದಿಲ್ಲಿ,ಎ.21: ಮು.ನ್ಯಾ.ರಂಜನ ಗೊಗೊಯಿ ಅವರ ವಿರುದ್ಧ ಕೇಳಿ ಬಂದಿರುವ ಲೈಂಗಿಕ  ಕಿರುಕುಳ ಆರೋಪಗಳ ನಡುವೆಯೇ ವಿತ್ತಸಚಿವ ಅರುಣ್ ಜೇಟ್ಲಿ ಅವರು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರ ಹುದ್ದೆ ಮತ್ತು ಹಾಲಿ ಸಿಜೆಐ ಗೊಗೊಯಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಭಾರತವು ತನ್ನ ಸ್ವತಂತ್ರ ನ್ಯಾಯಾಂಗದ ಬಗ್ಗೆ ಸದಾ ಹೆಮ್ಮೆಯನ್ನು ಹೊಂದಿದೆ ಎಂದಿರುವ ಅವರು, ಸಿಜೆಐ ಸ್ಥಾನದ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದ್ದಾರೆ.

‘ಇದು ನ್ಯಾಯಾಂಗದ ಬೆನ್ನಿಗೆ ನಿಲ್ಲಬೇಕಾದ ಸಮಯ’ ಶೀರ್ಷಿಕೆಯ ಬ್ಲಾಗ್‌ನಲ್ಲಿ ಜೇಟ್ಲಿ ಅವರು ಕೇವಲ ಕಾನೂನು,ನ್ಯಾಯ ಮತ್ತು ನ್ಯಾಯಪರತೆಗೆ ಬದ್ಧರಾಗಿರುವ ಸಿಜೆಐ ಅವರು ನ್ಯಾಯಾಂಗ ಸಂಸ್ಥೆಗಳ ಮುಖ್ಯಸ್ಥರಾಗಿರುವ ಬಗ್ಗೆ ಮಾತನಾಡಿದ್ದಾರೆ.

ಅವರು ‘ಮಾಸ್ಟರ್ ಆಫ್ ದಿ ರೋಸ್ಟರ್’ ಮತ್ತು ನ್ಯಾಯಾಧೀಶರ ನೇಮಕಗಳನ್ನು ಶಿಫಾರಸು ಮಾಡುವ ಕೊಲಿಜಿಯಂ ಮುಖ್ಯಸ್ಥರಾಗಿದ್ದಾರೆ ಎಂದಿರುವ ಜೇಟ್ಲಿ,ಸಿಜೆಐ ಮತ್ತು ನ್ಯಾಯಾಂಗ ಸಂಸ್ಥೆಗಳಿಗೆ ವಿಶ್ವಾಸಾರ್ಹತೆ ಮತ್ತು ಗೌರವ ಅಗತ್ಯವಾಗಿವೆ. ನ್ಯಾಯಾಂಗದ ಘನತೆ ನಾಶಗೊಂಡರೆ ಸಂಸ್ಥೆಯೇ ಕುಸಿಯುತ್ತದೆ ಎಂದಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಮಾಜಿ ಮಹಿಳಾ ಉದ್ಯೋಗಿ ಇತರ ಸುಪ್ರೀಂ ನ್ಯಾಯಾಧೀಶರು ಮತ್ತು ಮಾಧ್ಯಮಗಳಿಗೆ ತನ್ನ ಅಫಿದಾವತ್ ಪ್ರತಿಗಳನ್ನು ಸಲ್ಲಿಸುವ ಮೂಲಕ ಈಗಿನ ಸಿಜೆಐ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವುದು ಪ್ರಶ್ನಾರ್ಹವಾಗಿದೆ. ‘ಸಾಂಸ್ಥಿಕ ವ್ಯತ್ಯಯ’ಗಳ ಅಸಮಾನ ದಾಖಲೆಯನ್ನು ಹೊಂದಿರುವ ನಾಲ್ಕು ಡಿಜಿಟಲ್ ಮಾಧ್ಯಮಗಳು ಒಂದೇ ಬಗೆಯ ಪ್ರಶ್ನಾವಳಿಗಳನ್ನು ಸಿಜೆಐ ಅವರಿಗ ಕಳುಹಿಸಿವೆ ಎಂದಾಗ ಇಲ್ಲಿ ಮೇಲ್ನೋಟಕ್ಕೆ ಕಾಣಿಸುತ್ತಿರುವದಕ್ಕಿಂತ ಹೆಚ್ಚಿನದು ಬೇರೆ ಏನೋ ಇದೆ ಎನ್ನ್ನುವುದು ಸ್ಪಷ್ಟ ಎಂದು ಜೇಟ್ಲಿ ಬರೆದಿದ್ದಾರೆ.

ಹಾಲಿ ಸಿಜೆಐ ತನ್ನ ನೀತಿಗಳು ಮತ್ತು ಋಜುತ್ವಕ್ಕಾಗಿ ಅತ್ಯಂತ ಗೌರವಾನ್ವಿತರಾಗಿದ್ದಾರೆ ಮತ್ತು ವಿಶ್ವಾಸಾರ್ಹತೆಯಿಲ್ಲದ ವ್ಯಕ್ತಿಗೆ ಮಹತ್ವ ನೀಡುವುದು ಸಂಸ್ಥೆಯನ್ನು ಅಸ್ಥಿರಗೊಳಿಸುವವರಿಗೆ ನೆರವು ನೀಡುತ್ತದೆ. ನ್ಯಾ.ಗೊಗೊಯಿ  ಅವರ ನ್ಯಾಯಿಕ ಅಭಿಪ್ರಾಯವನ್ನು ಒಪ್ಪದ ಟೀಕಾಕಾರರೂ ಅವರ ಮೌಲಿಕ ವ್ಯವಸ್ಥೆಯನ್ನೆಂದಿಗೂ ಪ್ರಶ್ನಿಸಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿಯ ಅತ್ಯಂತ ಗೌರವಾನ್ವಿತ ಸಂಸ್ಥೆಗಳಲ್ಲೊಂದಾಗಿರುವ ಸರ್ವೋಚ್ಚ ನ್ಯಾಯಾಲಯವನ್ನು ಸಮರ್ಥಿಸುವ ಮೂಲಕ ನ್ಯಾಯಾಂಗಕ್ಕೆ ಬೆಂಬಲಕ್ಕಾಗಿಯೂ ಜೇಟ್ಲಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News