ಹಜ್ ಯಾತ್ರಿಕರಿಗೆ ನೀಡುವ ಲಸಿಕೆಗಳಿಗಾಗಿ ಪರದಾಡುತ್ತಿರುವ ಆರೋಗ್ಯ ಸಚಿವಾಲಯ

Update: 2019-04-21 17:03 GMT

ಹೊಸದಿಲ್ಲಿ,ಎ.21: ಹಜ್ ಯಾತ್ರಿಗಳಿಗಾಗಿ ಅಗತ್ಯವಾಗಿರುವ ಮೆನಿಂಜೈಟಿಸ್(ಮಿದುಳ್ಪೊರೆಯೂತ) ಲಸಿಕೆಗಳ ಕೊರತೆಯಿಂದಾಗಿ ಆರೋಗ್ಯ ಸಚಿವಾಲಯವು ಪರದಾಡುತ್ತಿದೆ. ಈ ಲಸಿಕೆಗಳನ್ನು ತಯಾರಿಸುತ್ತಿದ್ದ ದೇಶದ ಏಕೈಕ ಕಂಪನಿ ಗಾಝಿಯಾಬಾದ್‌ನ  ಬಯೊಮೆಡ್ ಪ್ರೈ.ಲಿ.ನ ಪೋಲಿಯೊ ಲಸಿಕೆಗಳು ಟೈಪ್-2 ಪೋಲಿಯೋ ವೈರಸ್‌ನಿಂದ  ಕಲುಷಿತಗೊಂಡಿದ್ದು, ಬೆಳಕಿಗೆ ಬಂದ ಬಳಿಕ ಸರಕಾರದ ಆದೇಶದಂತೆ ಎಲ್ಲ ಮಾನವ ಲಸಿಕೆಗಳ ಉತ್ಪಾದನೆಯನ್ನು ಸಂಸ್ಥೆಯು ಕಳೆದ ವರ್ಷದಿಂದ ಸ್ಥಗಿತಗೊಳಿಸಿರುವುದು ಈ ಸ್ಥಿತಿಗೆ ಕಾರಣವಾಗಿದೆ.

ಈ ವರ್ಷದ ಜುಲೈನಲ್ಲಿ ಸುಮಾರು 1.27 ಲಕ್ಷ ಮುಸ್ಲಿಮರು ವಾರ್ಷಿಕ ಹಜ್ ಯಾತ್ರೆಯನ್ನು ಕೈಗೊಳ್ಳುವ ನಿರೀಕ್ಷೆಯಿದ್ದು,ಸಚಿವಾಲಯವು ಕನಿಷ್ಠ 1.47 ಲ.ಡೋಸ್‌ಗಳನ್ನು ವ್ಯವಸ್ಥೆ ಮಾಡಬೇಕಾಗುತ್ತದೆ. ರಾಜ್ಯಗಳಿಗೆ ಸಾಗಾಟದ ವೇಳೆ ಕೆಲವು ಲಸಿಕೆಗಳು ಕ್ಷಮತೆಯನ್ನು ಕಳೆದುಕೊಳ್ಳ್ಳುವುದರಿಂದ ಹೆಚ್ಚುವರಿ ಲಸಿಕೆಗಳನ್ನು ಮೀಸಲಿಡಬೇಕಾಗುತ್ತದೆ.

ಗಾಝಿಯಾಬಾದ್ ಕಂಪನಿಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಲಸಿಕೆಗಳಿಗಾಗಿ ಪರ್ಯಾಯ ವ್ಯವಸ್ಥೆಗಳತ್ತ ಸಚಿವಾಲಯವು ದೃಷ್ಟಿ ಹಾಯಿಸಿದೆ. ಈ ಲಸಿಕೆಯನ್ನು ಆಮದು ಮಾಡಿಕೊಳ್ಳುತ್ತ್ತಿರುವ ಮುಂಬೈನ ಸನೋಫಿ ಪಾಶ್ಚರ್ ಇಂಡಿಯಾ ಮತ್ತು ಜಿಎಸ್‌ಕೆ ಫಾರ್ಮಾಸ್ಯೂಟಿಕಲ್ಸ್ ಜೊತೆ ಈಗಾಗಲೇ ಅದು ಮಾತುಕತೆಗಳನ್ನು ನಡೆಸುತ್ತಿದೆ.

ಹಜ್ ಮತ್ತು ಉಮ್ರಾ ಯಾತ್ರೆಗಳಿಗಾಗಿ ಸೌದಿ ಅರೇಬಿಯಾಕ್ಕೆ ಹೋಗುವವರು ತಾವು ಹಿಂದಿನ ಮೂರು ವರ್ಷಗಳ ಒಳಗೆ ಅಥವಾ ಸೌದಿಯನ್ನು ಪ್ರವೇಶಿಸುವ ಕನಿಷ್ಠ 10 ದಿನಗಳಿಗೆ ಮೊದಲು ಮೆನಿಂಜೈಟಿಸ್ ಲಸಿಕೆಗಳನ್ನು ತೆಗೆದುಕೊಂಡಿರುವ ಬಗ್ಗೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.

ಈ ಮೊದಲು ಬಯೊಮೆಡ್ ಸರಕಾರಕ್ಕೆ ಪ್ರತಿ ಲಸಿಕೆಗೆ 250 ರೂ.ದರದಲ್ಲಿ ಲಸಿಕೆಗಳನ್ನು ಒದಗಿಸುತ್ತಿತ್ತು. ಈಗ ಸರಕಾರವು ಲಸಿಕೆಗಳನ್ನು ಆಮದು ಮಾಡಿಕೊಳ್ಳುತ್ತಿರುವ ಕಂಪನಿಗಳಿಂದ ಖರೀದಿಸಲು ಪ್ರತಿ ಡೋಸ್‌ಗೆ ಸುಮಾರು 1

,500 ರೂ.ಗಳನ್ನು ಕಕ್ಕಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News