ಇಂತಹ ಅನಾಗರಿಕ ಕ್ರೌರ್ಯಕ್ಕೆ ಆಸ್ಪದವಿಲ್ಲ: ಪ್ರಧಾನಿ ಮೋದಿ ತೀವ್ರ ಖಂಡನೆ

Update: 2019-04-21 17:07 GMT

ಹೊಸದಿಲ್ಲಿ,ಎ.21: ರವಿವಾರ ಶ್ರೀಲಂಕಾದಲ್ಲಿ ಅಪಾರ ಸಾವುನೋವುಗಳಿಗೆ ಕಾರಣವಾದ ಭೀಕರ ಸರಣಿ ಸ್ಫೋಟಗಳನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿನರೇಂದ್ರ ಮೋದಿ ಅವರು,ಈ ಪ್ರದೇಶದಲ್ಲಿ ಇಂತಹ ಅನಾಗರಿಕ ಕ್ರೌರ್ಯಕ್ಕೆ ಆಸ್ಪದವಿಲ್ಲ. ಈ ಸಂಕಷ್ಟದ ಸಮಯದಲ್ಲಿ ಭಾರತವು ದ್ವೀಪರಾಷ್ಟ್ರ ದಜನತೆಯೊಂದಿಗಿದೆ ಎಂದು ಹೇಳಿದ್ದಾರೆ.

ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೈ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೋದಿ, ಸರಣಿಸ್ಫೋಟಗಳನ್ನು ಅತ್ಯಂತ ಕಟುವಾದ ಶಬ್ಧಗಳಲ್ಲಿ ಖಂಡಿಸಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಗಳನ್ನು ಅತ್ಯಂತ ಕ್ರೂರ ಮತ್ತು ಪೂರ್ವಯೋಜಿತ ಎಂದು ಬಣ್ಣಿಸಿದ ಮೋದಿ,ಈ ದಾಳಿಗಳು ನಮ್ಮ ಪ್ರದೇಶದಲ್ಲಿ ಮತ್ತು ಇಡೀ ವಿಶ್ವದಲ್ಲಿ ಭೀತಿವಾದವು ಇಡೀ ಮಾನವ ಕುಲಕ್ಕೆ ಒಡ್ಡಿರುವ ಅತ್ಯಂತ ಗಂಭೀರ ಸವಾಲನ್ನು ಇನ್ನೊಮ್ಮೆ ನೆನಪಿಸಿವೆ ಎಂದು ಹೇಳಿದರು.

ಭೀತಿವಾದವು ಒಡ್ಡಿರುವಂತಹ ಸವಾಲುಗಳ ವಿರುದ್ಧ ತನ್ನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಶ್ರೀಲಂಕಾಕ್ಕೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವ ಕೊಡುಗೆಯನ್ನು ಮೋದಿ ಇದೇ ಸಂದರ್ಭ ಮತ್ತೆ ಪ್ರಸ್ತಾಪಿಸಿದರು.

ಗಾಯಾಳುಗಳ ಶೀಘ್ರ ಚೇತರಿಕೆಯನ್ನು ಹಾರೈಸಿದ ಅವರು,ಚಿಕಿತ್ಸೆಗಾಗಿ ಯಾವುದೇ ಅಗತ್ಯ ನೆರವನ್ನು ಒದಗಿಸುವ ಭರವಸೆಯನ್ನು ನೀಡಿದರು.

ಮೃತರ ಕುಟುಂಬಗಳಿಗೆ ಮೋದಿ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸಿದರು ಎಂದೂ ಪ್ರಧಾನಿ ಕಚೇರಿಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News