ಕಡಬ: ಮಾನಸಿಕ ಅಸ್ವಸ್ಥನ ಮೇಲೆ ಪೋಲೀಸ್ ಪ್ರಹಾರ; ಆರೋಪ

Update: 2019-04-21 17:23 GMT

ಕಡಬ:  ರಸ್ತೆ ಬದಿಯಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಸಾರ್ವಜನಿಕವಾಗಿ ಲಾಟಿಯಿಂದ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ ಎನ್ನುವ ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಆದರೆ ಕಡಬ ಪೋಲೀಸರು ಹಲ್ಲೆ ನಡೆಸಿರುವುದನ್ನು ನಿರಾಕರಿಸಿದ್ದಾರೆ. ಕಡಬ ಮಾಡದ ದೈವಗಳ ಜಾತ್ರೋತ್ಸವದ ಪ್ರಯುಕ್ತ ರವಿವಾರ ಮಧ್ಯಾಹ್ನ ಮೆರವಣಿಗೆ ಕಡಬದ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಪೊಲೀಸ್ ಠಾಣೆಯ ಸಮೀಪ ರಸ್ತೆ ಬದಿಯಲ್ಲಿ ಈ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥರಾಗಿರುವ ವಯೋ ವೃದ್ಧರೊಬ್ಬರು ರಸ್ತೆ ಬದಿ ಯಾರಿಗೋ ಬೈಯುತ್ತಾ, ಕೈಯಲ್ಲಿ ಕಲ್ಲು ಹಿಡಿದುಕೊಂಡಿದ್ದರು ಎನ್ನುವ ಕಾರಣಕ್ಕೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ವೃದ್ಧನಿಗೆ ಲಾಟಿಯಿಂದ ಹೊಡೆದಿದ್ದಾರೆ. ಏಟು ತಿಂದ ವೃದ್ಧ ನೆಲಕ್ಕೆ ಕುಸಿದು ಬಿಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.  ಒಬ್ಬ ಅಸಹಾಯಕ ವೃದ್ಧನ ಮೇಲೆ ಪೊಲೀಸ್ ಸಿಬ್ಬಂದಿ ದರ್ಪ ಮೆರೆದಿದ್ದಾರೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ.

ಸಾರ್ವಜನಿಕವಾಗಿಯೇ ನಡೆದಿದೆ ಎನ್ನಲಾದ ಘಟನೆಯ ವಿಚಾರದಲ್ಲಿ ಕಡಬದಾದ್ಯಂತ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮಾತ್ರವಲ್ಲ ಹಲ್ಲೆ ನಡೆಸಿದ್ದಾರೆ ಎನ್ನಲಾದ ವೀಡಿಯೊ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಡಬ ಎಸ್.ಐ ಪ್ರಕಾಶ್ ದೇವಾಡಿಗ ಅವರು  ನಮ್ಮ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರಿಗೆ ಮಾನಸಿಕ ಅಸ್ವಸ್ಥರಾಗಿರುವ ವ್ಯಕ್ತಿ ಕಲ್ಲೆಸೆದಿದ್ದಾರೆ. ಅದಕ್ಕಾಗಿ ಅವರನ್ನು ನಮ್ಮ ಸಿಬ್ಬಂದಿ ಹಿಡಿದು ಠಾಣೆಗೆ ಕರೆಸಿ ವಿಚಾರಣೆ ಮಾಡಿ ಬಿಟ್ಟಿದ್ದಾರೆ. ಯಾವುದೇ ಹಲ್ಲೆ ನಡೆಸಿಲ್ಲ, ಅಮಾನವೀಯವಾಗಿ ವರ್ತಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News