ವಿಶಿಷ್ಟ ಪರಿಕಲ್ಪನೆಯೊಂದಿಗೆ ಅಮೇಠಿ, ವಾರಣಾಸಿಯಲ್ಲಿ ಪುತ್ತೂರಿನ ಪತ್ರಿಕಾ ಸಂಪಾದಕರ ಸ್ಪರ್ಧೆ

Update: 2019-04-21 17:39 GMT

ಪುತ್ತೂರು: ಡೆಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳಿಯಿಂದ ಡೆಲ್ಲಿಗೆ ಆಡಳಿತ ಆಗಬೇಕು' ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಪುತ್ತೂರಿನ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ಅವರು ಪ್ರಧಾನಿ ಅಭ್ಯರ್ಥಿಗಳೆಂದು ಬಿಂಬಿಸಲಾಗಿರುವ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ದರಾಗಿದ್ದಾರೆ.

ಬಲಾತ್ಕಾರದ ಬಂದ್, ಭ್ರಷ್ಟಾಚಾರ, ನೇತ್ರಾವತಿ ನದಿ ತಿರುವು ಯೋಜನೆ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿಷಯ ಮತ್ತು ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ `ಡೆಲ್ಲಿಯಿಂದ ಹಳ್ಳಿಗೆ ಆಡಳಿತ ಅಲ್ಲ, ಹಳ್ಳೆಯಿಂದ ಡೆಲ್ಲಿಗೆ ಆಡಳಿತ ಆಗಬೇಕು' ಎಂಬ ವಿಚಾರವನ್ನು ರಾಷ್ಟ್ರದ ಪ್ರಮುಖ ನಾಯಕರಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರಿಗೆ ಮನವರಿಕೆ ಮಾಡುವುದಕ್ಕಾಗಿ ಮತ್ತ ರಾಷ್ಟ್ರ ಮಟ್ಟದಿಂದಲೇ ಈ ವಿಚಾರಗಳು ಅನುಷ್ಠಾನಗೊಳ್ಳಬೇಕೆಂಬ ಕಾರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸುವ ಅಮೇಠಿ ಮತ್ತು ನರೇಂದ್ರ ಮೋದಿ ಸ್ಪರ್ಧಿಸುವ ವಾರಣಾಸಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಡಾ.ಯು.ಪಿ. ಶಿವಾನಂದರವರು ಅಮೇಥಿಯಿಂದ ದೆಹಲಿಗೆ ತೆರಳಿದ್ದಾರೆ.

ತನ್ನ ವಿಚಾರಧಾರೆಗಳನ್ನು ರಾಷ್ಟ್ರದ ರಾಜಧಾನಿಯಾದ ದೆಹಲಿಗೂ ತಲುಪಿಸಬೇಕು ಎಂಬ ಕಾರಣಕ್ಕಾಗಿ ಈಗಾಗಲೇ ಶಿವಾನಂದರವರು ದೆಹಲಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ. 

ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಅಂಗೀಕಾರ: 

ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಡಾ.ಯು.ಪಿ. ಶಿವಾನಂದರವರು ಎಪ್ರಿಲ್ 18ರಂದು ನಾಮಪತ್ರ ಸಲ್ಲಿಸಿದ್ದಾರೆ. ಎ.20ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, ಅಂಗೀಕಾರಗೊಂಡಿದೆ. 

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ಪರ್ಧಿಸುತ್ತಿರುವ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಡಾ.ಯು.ಪಿ. ಶಿವಾನಂದರವರು ಎ.18ರಂದು ಅಮೇಥಿಯ ಗೌರಿಗಂಜ್‍ನಲ್ಲಿರುವ ಚುನಾವಣಾಧಿಕಾರಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದರು.

ಅಮೇಠಿ ಲೋಕಸಭಾ ಕ್ಷೇತ್ರದ 10 ಮಂದಿ ಮತದಾರರು ಇವರಿಗೆ ಸೂಚಕರಾಗಿದ್ದರು. ಎ. 20ರಂದು ನಾಮಪತ್ರ ಪರೀಶಿಲನೆ ನಡೆದಿದ್ದು ಯು.ಪಿ. ಶಿವಾನಂದರವರ ನಾಮಪತ್ರ ಸ್ವೀಕೃತಗೊಂಡಿದೆ. ಅಮೇಠಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರದ ಸಚಿವೆ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.

ವಾರಣಾಸಿಯಲ್ಲೂ ಯು.ಪಿ. ಶಿವಾನಂದರಿಂದ ಸ್ಪರ್ಧೆ: 

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ಪರ್ಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿಯೂ ಡಾ.ಯು.ಪಿ. ಶಿವಾನಂದರವರು ಸ್ಪರ್ಧಿಸ ಲಿದ್ದು ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ವಾರಣಾಸಿ ಕ್ಷೇತ್ರದಲ್ಲಿ ಮೋದಿಯವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸಹೋದರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

1985ರಲ್ಲಿ ವಿಧಾನಸಭೆ, 2009ರಲ್ಲಿ ಲೋಕಸಭೆಯಲ್ಲಿ ಸ್ಪರ್ಧೆ:

ಸುಳ್ಯದಲ್ಲಿ ಬಳಕೆದಾರರ ವೇದಿಕೆಯನ್ನು ಸ್ಥಾಪಿಸಿ ಆ ಮೂಲಕ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬಂದ ಡಾ. ಯು.ಪಿ. ಶಿವಾನಂದ ಅವರು ಅಲ್ಲಿ ಭ್ರಷ್ಟಾಚಾರದ ವಿರುದ್ಧ ಮಾಡಿದ ಜನಜಾಗೃತಿಗಾಗಿ ಕೆಲಸ ಮಾಡಿದ್ದರು. ಅದೇ ವಿಚಾರವನ್ನು ಮುಂದಿಟ್ಟು 1985ರಲ್ಲಿ ಅಂದಿನ ರಾಜ್ಯದ ಸಂಭಾವ್ಯ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ, ಎಸ್. ಬಂಗಾರಪ್ಪ ಮತ್ತು ರಾಮಕೃಷ್ಣ ಹೆಗಡೆ ಅವರ ಕ್ಷೇತ್ರದಲ್ಲಿ ಹಾಗೂ ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಭ್ರಷ್ಟಾಚಾರದ ಪರಾಕಾಷ್ಟೆಯಲ್ಲಿ ಮುಖ್ಯಮಂತ್ರಿ ಗಳಾದವರಿಗೆ ಮನವರಿಕೆ ಮಾಡುವುದು ಆಗಿನ ಅವರ ಚುನಾವಣಾ ಸ್ಪರ್ಧೆಯ ಉದ್ದೇಶವಾಗಿತ್ತು. 2009ರಲ್ಲಿ ದ.ಕ.ಜಿಲ್ಲೆಯಿಂದ ಲೋಕಸಭೆಗೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿಯೂ ಭ್ರಷ್ಟಾಚಾರ, ಬಲತ್ಕಾರದ ಬಂದ್ ಮತ್ತು ಸಾಮಾಜಿಕ ಸಾಮರಸ್ಯದ ಉದ್ದೇಶವನ್ನು ಇಟ್ಟುಕೊಂಡು ಪಕ್ಷೇತರರಾಗಿ ಸ್ಪರ್ಧೆ ನಡೆಸಿದ್ದರು. ಇದೀಗ ಸಂಭಾವ್ಯ ಪ್ರಧಾನ ಮಂತ್ರಿಗಳ ವಿರುದ್ಧ ಸ್ಪರ್ಧಿಸಿ ತನ್ನ ಮನದಿಂಗಿತವನ್ನು ಅವರ ಮುಂದೆ ತೆರೆದಿಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

ಜನಪರ ಹೋರಾಟಗಾರರಾದ ಸಂಪಾದಕ ಯು.ಪಿ. ಶಿವಾನಂದ 

ಡಾ. ಯು.ಪಿ. ಶಿವಾನಂದರು ವೈದ್ಯರಾಗಿ ರೋಗಗಳಿಗೆ ಔಷಧಿ ನೀಡುವ ಕೆಲಸದಿಂದಲೂ ಸಾಮಾಜಿಕ ಪಿಡುಗುಗಳಿಗೆ ಔಷಧಿ ಮಾಡುವ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಸುಳ್ಯದಲ್ಲಿ ಬಳಕೆದಾರರ ವೇದಿಕೆಯ ಮೂಲಕ ಹೋರಾಟದ ಬದುಕು ಆರಂಭಿಸಿದ್ದ ಅವರು ಬಳಿಕ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ `ಸುದ್ದಿ ಬಿಡುಗಡೆ' ಎಂಬ ಸ್ಥಳೀಯ ಪತ್ರಿಕೆಯನ್ನು ನಡೆಸಿಕೊಂಡು ಬಂದಿದ್ದಾರೆ.

ಈ ಪತ್ರಿಕೆಗಳನ್ನು ಜನರ ಧ್ವನಿಯಾಗಿ, ಜನರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಆಶೋತ್ತರಗಳನ್ನು ಈಡೇರಿಸುವ ಒಂದು ಪ್ರತಿಭಟನಾ ಅಸ್ತ್ರವಾಗಿಯೇ ಬೆಳೆಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News