ಕಿರುತೆರೆ ಹಾಸ್ಯನಟ ಇನ್ನು ಈ ದೇಶದ ಅಧ್ಯಕ್ಷ!

Update: 2019-04-22 04:41 GMT

ಕೀವ್, ಎ.22: ಯಾವ ರಾಜಕೀಯ ಅನುಭವವೂ ಇಲ್ಲದ ಖ್ಯಾತ ಹಾಸ್ಯನಟ ವೊಲೊದಿಮರ್ ಝೆಲೆಸ್ಕಿ, ರವಿವಾರ ನಡೆದ ಉಕ್ರೇನ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ದೇಶದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಈ ಅಪೂರ್ವ ನಾಯಕನಿಗೆ ವಿಶ್ವದ ವಿವಿಧೆಡೆಗಳಿಂದ ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ.

ಟಿವಿ ಧಾರಾವಾಹಿಯೊಂದರಲ್ಲಿ ಅಧ್ಯಕ್ಷರ ಪಾತ್ರ ನಿರ್ವಹಿಸಿದ್ದಷ್ಟೇ ವೊಲೊದಿಮರ್ ಅವರಿಗೆ ಇರುವ ರಾಜಕೀಯ ಅನುಭವ. ವೊಲೊದಿಮರ್ ಶೇಕಡ 73 ಮತಗಳನ್ನು ಪಡೆದು ಹಾಲಿ ಅಧ್ಯಕ್ಷ ಪೆಟ್ರೊ ಪೊರೊಶೆನ್ಕೊ ಅವರಿಗಿಂತ ಭಾರಿ ಮುನ್ನಡೆಯಲ್ಲಿದ್ದಾರೆ ಎಂದು ಭಾಗಶಃ ಫಲಿತಾಂಶವನ್ನು ಅಧಿಕಾರಿಗಳು ಪ್ರಕಟಿಸಿದ್ದಾರೆ. ಚಲಾಯಿತ ಮತಗಳ ಪೈಕಿ ಶೇಕಡ 42ರಷ್ಟು ಮತಗಳ ಎಣಿಕೆ ಮುಗಿದಿದ್ದು, ಪೊರೊಶೆನ್ಕೊ ಕೇವಲ ಶೇಡಕ 24ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಹಸನವಾಗಿ ಆರಂಭವಾದ ಪ್ರಚಾರ ಕಾರ್ಯದ ಬಳಿಕ ಮತದಾರರು ಹಾಲಿ ಆಡಳಿತದ ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ ಹಾಗೂ ಪೂರ್ವ ಉಕ್ರೇನ್‌ನಲ್ಲಿ 13 ಸಾವಿರ ಜೀವಗಳನ್ನು ಬಲಿಪಡೆದ ರಶ್ಯ ಬೆಂಬಲಿತ ಪ್ರತ್ಯೇಕತಾವಾದಿಗಳ ಯುದ್ಧದಿಂದ ಹತಾಶರಾಗಿ ಜನತೆ ಹಾಸ್ಯನಟನಿಗೆ ಮತದ ಅಭಯ ನೀಡಿದ್ದಾರೆ.

"ಸರ್ವೆಂಟ್ ಆಫ್ ದ ಪೀಪಲ್" ಧಾರಾವಾಹಿಯ ಈ ನಟ, ಸವಾಲುಗಳ ಬೆಟ್ಟವನ್ನೇ ಹೊತ್ತಿರುವ 45 ದಶಲಕ್ಷ ಜನಸಂಖ್ಯೆಯ ಈ ರಾಷ್ಟ್ರದ ಅಧಿಕಾರ ಸೂತ್ರ ಹಿಡಿಯಲಿದ್ದಾರೆ. "ನಿಮ್ಮನ್ನು ಎಂದೂ ಕಡೆಗಣಿಸುವುದಿಲ್ಲ" ಎಂದು ಸಂಭ್ರಮಾಚರಣೆ ವೇಳೆ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ಪಷ್ಟಪಡಿಸಿದರು.

"ನಮ್ಮತ್ತ ನೋಡಿ; ಎಲ್ಲವೂ ಸಾಧ್ಯ" ಎನ್ನುವ ಸಂದೇಶವನ್ನು ಎಲ್ಲ ಸೋವಿಯತ್ ಒಕ್ಕೂಟದ ದೇಶಗಳಿಗೆ ಈ ಚುನಾವಣೆ ರವಾನಿಸಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News