ಎ.26-27: ಬ್ಯಾರೀಸ್ ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ

Update: 2019-04-22 09:58 GMT

ಮಂಗಳೂರು, ಎ.22: ಬ್ಯಾರೀಸ್ ಗ್ರೂಪ್ ಸಂಸ್ಥಾಪಿತ ಬ್ಯಾರೀಸ್ ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಆಶ್ರಯದಲ್ಲಿ ಬ್ಯಾರೀಸ್ ನಾಲೇಜ್ ಕ್ಯಾಂಪಸ್‌ನಲ್ಲಿ ಎ.26 ಮತ್ತು 27ರಂದು ಸುಸ್ಥಿರ ನಗರಾಭಿವೃದ್ಧಿ, ಸಂಪನ್ಮೂಲ ಸಂರಕ್ಷಣೆ ಮತ್ತು ಆಹಾರ ಭದ್ರತೆ ಬಗ್ಗೆ ಸರ್ಫ್- 2019 ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಬಿಐಟಿ ಪ್ರಾಂಶುಪಾಲ ಡಾ.ಪಿ. ಮಹಾಬಲೇಶ್ವರಪ್ಪ, ಎ. 26ರಂದು ಬೆಳಗ್ಗೆ ಆಹಾರ ಭದ್ರತೆ ಬಗ್ಗೆ ಮೈಸೂರು ಸಿಎಫ್‌ಟಿಆರ್‌ಐ ನಿರ್ದೇಶಕ ಅಲೋಕ್ ಕುಮಾರ್ ಶ್ರೀವಾತ್ಸವ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ ಎಂದರು.

ಅಂದು ಮಧ್ಯಾಹ್ನ ಮಲೇಶ್ಯದ ಖ್ಯಾತ ಸಂಶೋಧಕ ಡಾ.ಎಸ್.ಎ.ಖಾನ್ ನೇತೃತ್ವದಲ್ಲಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಸುಧಾರಣೆಗಳು ಮತ್ತು ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದಲ್ಲಿ ಸಮ್ಮೇಳನ ನಡೆಯಲಿದೆ. ಎ.27ರಂದು ಬೆಳಗ್ಗೆ ಭಾರತೀಯ ಚಿತ್ರ ನಿರ್ದೇಶಕ ಮನ್ಸೂರ್ ಖಾನ್ ‘ಸಂಪನ್ಮೂಲ ಸಂರಕ್ಷಣೆ’ ಎಂಬ ವಿಷಯದಲ್ಲಿ ಮಾತನಾಡಲಿದ್ದು, ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ ಸುಸ್ಥಿರ ನಗರಾಭಿವೃದ್ಧಿ ಬಗ್ಗೆ ಮಲೇಶ್ಯದ ವಾಸ್ತುಶಿಲ್ಪಿ, ಪರಿಸರವಾದಿ ಡಾ.ಕೆನ್ ಯಾಂಗ್ ‘ಸುಸ್ಧಿರ ನಗರಾಭಿವೃದ್ಧಿ’ ಬಗ್ಗೆ ಮಾತನಾಡಲಿರುವರು ಎಂದು ಹೇಳಿದರು.

ಪ್ರಚಲಿತ ಮಹತ್ವದ ವಿಷಯಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚರ್ಚೆ, ಚಿಂತನ ಮಥನ ನಡೆಸುವುದು ಕಾರ್ಯಸಾಧು ಎನಿಸುವ ಯೋಚನೆಗಳು ಹಾಗೂ ದೀರ್ಘಾವಧಿ ಪರಿಹಾರಗಳನ್ನು ಮುಂದಿಡುವುದು, ಸಮ್ಮೇಳನದ ಫಲಿತಾಂಶವನ್ನು ಸರಕಾರ ಹಾಗೂ ನೀತಿ ನಿರೂಪಕರಿಗೆ ಮತ್ತು ರಾಜಕೀಯ ಮುಖಂಡರಿಗೆ ಸಲ್ಲಿಸಿ, ದೇಶದ ಅಭಿವೃದ್ಧಿಯಲ್ಲಿ ಅನುಷ್ಠಾನಗೊಳಿಸುವಂತೆ ಕೋರಲಾಗುವುದು ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಚಾಲಕ ಡಾ. ಮುಸ್ತಫಾ ಬಸ್ತಿಕೋಡಿ, ಬೀಡ್ಸ್ ಪ್ರಾಂಶುಪಾಲ ಡಾ. ಅಲೋಕ್ ಎಲ್‌ಪಿ ಮೆಂಡೊನ್ಸಾ, ಬಿಐಟಿ ಇಸಿಇ ವಿಭಾಗದ ಮುಖ್ಯಸ್ಥ ಡಾ. ಅಬ್ದುಲ್ಲಾ ಗುಬ್ಬಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News