ಇಂದು ಮಧ್ಯರಾತ್ರಿಯಿಂದ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ

Update: 2019-04-22 12:28 GMT

ಕೊಲಂಬೋ, ಎ.22: ಈಸ್ಟರ್ ದಿನವಾದ ರವಿವಾರ ಶ್ರೀಲಂಕಾದ ರಾಜಧಾನಿ ಕೊಲಂಬೋ ನಗರದಲ್ಲಿ ಎರಡು ಚರ್ಚುಗಳು ಹಾಗೂ ನಾಲ್ಕು ಹೋಟೆಲುಗಳಲ್ಲಿ ನಡೆದ ಭೀಕರ ಸ್ಫೋಟಗಳಲ್ಲಿ 290 ಜನರು ಸಾವಿಗೀಡಾಗಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಸುರಕ್ಷತೆಯ ದೃಷ್ಟಿಯಿಂದ ಸರಕಾರ ಸೋಮವಾರ ಮಧ್ಯರಾತ್ರಿಯಿಂದ ಮತ್ತೆ ತುರ್ತು ಪರಿಸ್ಥಿತಿ ಹೇರಲು ನಿರ್ಧರಿಸಿದೆ.

ಪೊಲೀಸರು ಹಾಗೂ ದೇಶದ ಮೂರೂ ರಕ್ಷಣಾ ಪಡೆಗಳಿಗೆ ಸಾರ್ವಜನಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ.

ರವಿವಾರ ದಾಳಿ ನಡೆದ ಬೆನ್ನಲ್ಲೇ ಅನಿರ್ದಿಷ್ಟಾವಧಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದರೂ ಸೋಮವಾರ ಬೆಳಗ್ಗೆ ಈ ಆದೇಶ  ವಾಪಸ್ ಪಡೆಯಲಾಗಿತ್ತಲ್ಲದೆ, ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವ ಉದ್ದೇಶದಿಂದ ಎರಡು  ದಿನ ಸಾರ್ವಜನಿಕ ರಜೆಯನ್ನೂ  ಘೋಷಿಸಲಾಗಿದೆ.

ಇಲ್ಲಿಯ ತನಕ ಪೊಲೀಸರು ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ 24 ಮಂದಿಯನ್ನು ಬಂಧಿಸಿದ್ದಾರೆ. ಈ ಕುರಿತಂತೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲವಾದರೂ ಈ 24 ಮಂದಿಯನ್ನೂ ಕೊಲಂಬೋ ನಗರದ ಆಸುಪಾಸಿನ ಎರಡು ಪ್ರದೇಶಗಳಿಂದ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿಯ ತನಕ ಯಾವುದೇ ಸಂಘಟನೆ ಈ ದಾಳಿಗಳಿಗೆ ಹೊಣೆ ಹೊತ್ತಿಲ್ಲ.

ರಾಜಧಾನಿಯೆಲ್ಲೆಡೆ ಬಂದೂಕುಗಳನ್ನು ಹಿಡಿದುಕೊಂಡು ಅತ್ತಿತ್ತ ಸಾಗುತ್ತಿರುವ ಮಿಲಿಟರಿ ಸಿಬ್ಬಂದಿ ಕಾಣಿಸುತ್ತಿದ್ದು, ಹಲವಾರು ಹೋಟೆಲುಗಳು, ನಗರದ ವಿಶ್ವ ವಾಣಿಜ್ಯ ಕೇಂದ್ರ ಮತ್ತಿತರ ಪ್ರಮುಖ ಸ್ಥಳಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News