ಪುತ್ತಿಗೆ ಶ್ರೀಗಳಿಂದ ಶಿಷ್ಯ ಸ್ವೀಕಾರ: ಕಿರಿಯ ಯತಿಗೆ ಶ್ರೀಸುಶ್ರೀಂದ್ರತೀರ್ಥ ನಾಮಕರಣ

Update: 2019-04-22 14:35 GMT

ಉಡುಪಿ, ಎ. 22: ಉಡುಪಿಯ ಅಷ್ಟಮಠಗಳಲ್ಲೊಂದಾಗ ಪುತ್ತಿಗೆ ಮಠಕ್ಕೆ ತಮ್ಮ ಉತ್ತರಾಧಿಕಾರಿಯಾಗಿ ಉಡುಪಿಯ ಪ್ರಶಾಂತ ಆಚಾರ್ಯ (29) ಇವರನ್ನು ಸ್ವೀಕರಿಸಿದ ಶ್ರೀಸುಗುಣೇಂದ್ರತೀರ್ಥರು, ಆತನನ್ನು ತಮ್ಮ ಶಿಷ್ಯನಾಗಿ ಸ್ವೀಕರಿಸಿ, ಸನ್ಯಾಸದೀಕ್ಷೆ ನೀಡಿ ಶ್ರೀಸುಶ್ರೀಂದ್ರತೀರ್ಥರೆಂದು ನಾಮಕರಣ ಮಾಡಿದರು.

ಹಿರಿಯಡ್ಕ ಸಮೀಪದ ಪುತ್ತಿಗೆಯಲ್ಲಿರುವ ಶ್ರೀಪುತ್ತಿಗೆ ಮೂಲಮಠದಲ್ಲಿ ಕಳೆದ ಮೂರು ದಿನಗಳಿಂದ ಈ ಕುರಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದು ಪ್ರಶಾಂತ್ ಆಚಾರ್ಯರ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮಗಳು ಇಂದು ನಡೆದವು. ಕೊನೆಯಲ್ಲಿ ಪುತ್ತಿಗೆ ಮಠದ ಕಿರಿಯ ಯತಿಗೆ ಶ್ರೀಸುಶ್ರೀಂದ್ರ ತೀರ್ಥರೆಂದು ಶ್ರೀಸುಗುಣೇಂದ್ರತೀರ್ಥರು ನಾಮಕರಣ ಮಾಡಿದರು.

ಉಡುಪಿಯ ಕುಂಜಿಬೆಟ್ಟು ನಿವಾಸಿಗಳಾದ ಗುರುರಾಜ ಆಚಾರ್ಯ ಹಾಗೂ ವಿನುತಾ ಆಚಾರ್ಯರ ಹಿರಿಯ ಪುತ್ರರಾದ ಇಂಜಿನಿಯರಿಂಗ್ ಪದವೀಧರ ಹಾಗೂ ಬೆಂಗಳೂರಿನಲ್ಲಿ ಎರಿಕ್‌ಸನ್ ಎಂಬ ಎಂಎನ್‌ಸಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ದುಡಿಯುತಿದ್ದ ಪ್ರಶಾಂತ ಆಚಾರ್ಯರನ್ನು ಪುತ್ತಿಗೆ ಶ್ರೀಗಳು ಉತ್ತರಾಧಿಕಾರಿಗಳಾಗಿ ಆಯ್ಕೆ ಮಾಡಿದ್ದರು.

ಉಡುಪಿ ಶ್ರೀಕೃಷ್ಣ ಮಠದ ಸಂಸ್ಥಾಪಕರಾದ ಶ್ರೀಮಧ್ವಾಚಾರ್ಯರ ನೇರ ಶಿಷ್ಯರಲ್ಲೊಬ್ಬರಾದ ಶ್ರೀಉಪೇಂದ್ರತೀರ್ಥರಿಂದ ಪ್ರಾರಂಭಗೊಂಡ ಪುತ್ತಿಗೆ ಮಠದ ಗುರು ಪರಂಪರೆಯಲ್ಲಿ ಶ್ರೀಸುಶ್ರೀಂದ್ರ ತೀರ್ಥರು 31ನೇ ಪೀಠಾಧಿಪತಿ ಗಳಾಗಿ ನಿಯುಕ್ತರಾದರು.

ಶನಿವಾರದಿಂದ ವಿಧಿವಿಧಾನ: ಆಯ್ಕೆ ಮಾಡಿದ ವಟುವಿಗೆ ಸನ್ಯಾಸಾಶ್ರಮ ಮತ್ತು ಶಿಷ್ಯ ಸ್ವೀಕಾರದ ವಿಧಿವಿಧಾನಗಳು ಕಳೆದ ಶನಿವಾರ ಪ್ರಾರಂಭ ಗೊಂಡಿತ್ತು. ಮೊದಲ ದಿನ ವಿರಾಜ ಹೋಮ ಹಾಗೂ ಪ್ರಾಯಶ್ಚಿತ್ತ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದರೆ, ಎರಡನೇ ದಿನವಾದ ರವಿವಾರ ಆತ್ಮಶ್ರಾದ್ಧ ಕಾರ್ಯಗಳು ಹಾಗೂ ಪೂರ್ವಾಶ್ರಮದವರಿಗೆ ಶ್ರಾದ್ಧ ಕಾರ್ಯಕ್ರಮಗಳು ಮಠದ ಎದುರಿನ ಸ್ವರ್ಣ ನದಿ ತಟದಲ್ಲಿ ನಡೆದಿದ್ದವು.

ಇಂದು ಬೆಳಗ್ಗೆ ಸ್ವರ್ಣ ನದಿಯಲ್ಲಿ ಅವಗಾಹನ ಸ್ನಾನದೊಂದಿಗೆ ವಟು ಲೌಕಿಕ ವಸ್ತ್ರ ತ್ಯಾಗ ಮಾಡಿ ಕಷಾಯ ವಸ್ತ್ರಧಾರಣ ಮಾಡಿದರಲ್ಲದೇ, ಕೈಯಲ್ಲಿ ದಂಡವನ್ನು ಸ್ವೀಕರಿಸಿದರು. ಪುತ್ತಿಗೆ ಮಠದ ವಿಠಲ ದೇವರು ಹಾಗೂ ಪುತ್ತಿಗೆಯ ಸ್ತಂಭ ನರಸಿಂಹ ದೇವರಿಗೆ ಪ್ರಾರ್ಥಿಸಿದ ಬಳಿಕ ಶ್ರೀಸುಗುಣೇಂದ್ರ ತೀರ್ಥರು ಶಿಷ್ಯನಿಗೆ ಪ್ರಣವ ಮಂತ್ರೋಪದೇಶ ಮಾಡಿ ಶ್ರೀಸುಶ್ರೀಂದ್ರತೀರ್ಥರೆಂದು ಮರು ನಾಮಕರಣ ಮಾಡಿ ಮಠದ 31ನೇ ಯತಿಗಳಾಗಿ ಪಟ್ಟಾಭಿಷೇಕ ಮಾಡಿದರು.

ಬಳಿಕ ಸೇರಿದ ವಿದ್ವಾಂಸರು, ಗಣ್ಯರು ಹಾಗೂ ಮಠದ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಸುಗುಣೇಂದ್ರತೀರ್ಥರು, ಲೌಕಿಕ ಸಿಂಹಾಸನಕ್ಕಿಂತ ಶ್ರೇಷ್ಠ ಸಿಂಹಾಸನ ವೇದವ್ಯಾಸ ದೇವರ ವೇದಾಂತ ಸಾಮ್ರಾಜ್ಯ ಸಿಂಹಾಸನ.ಈ ಪರಂಪರೆಯನ್ನು ಶ್ರೀಸುಶ್ರೀಂದ್ರತೀರ್ಥರು ಸಮರ್ಥವಾಗಿ ಮುಂದುವರಿಸುವ ವಿಶ್ವಾಸ ತಮಗಿದೆ ಎಂದರು.

ಪ್ರಶಾಂತ ಆಚಾರ್ಯರನ್ನು ಶಿಷ್ಯರಾಗಿ ಸ್ವೀಕರಿಸುವ ಮುನ್ನ ಕಳೆದ ಎಂಟು ತಿಂಗಳಿನಿಂದ ತಾವು ಆತನ ಬಗ್ಗೆ ಸಮಗ್ರ ಮಾಹಿತಿಗಳನ್ನು ಸಂಗ್ರಹಿಸಿ, ಆತನ ಸ್ನೇಹಿತರು, ಬಂಧುಗಳು, ಕುಟುಂಬದಹಿರಿಯರೊಂದಿಗೆ ಮಾತನಾಡಿದ್ದು, ಕೊನೆಗೆ ಆತನ ಜಾತಕವನ್ನು ಕೂಲಂಕಷವಾಗಿ ಪರಿಶೀಲಿಸಿ ಒಪ್ಪಿಕೊಂಡಿದ್ದಾಗಿ ನುಡಿದರು.

ಲೌಕಿಕ ಜಗತ್ತಿನಲ್ಲಿದ್ದ 29ರ ಹರೆಯದ ವ್ಯಕ್ತಿಯನ್ನು ಆಯ್ಕೆ ಮಾಡಿ ಸನ್ಯಾಸ ನೀಡುವ ಸಾಹಸ ಮಾಡಲು ಶ್ರೀಕೃಷ್ಣನೇ ತನಗೆ ಪ್ರೇರಣೆ ಎಂದ ಪುತ್ತಿಗೆಶ್ರೀ, ಸಂಸ್ಕೃತದ ಬಗ್ಗೆ ಮೂಲಜ್ಞಾನವನ್ನು ಹೊಂದಿರುವ ಇವರು ಇನ್ನು 12 ವರ್ಷ ಪುತ್ತಿಗೆ ವಿದ್ಯಾಪೀಠದಲ್ಲೇ ಇದ್ದು ವೇದಾಂತ ಅಧ್ಯಯನ ನಡೆಸಲಿದ್ದಾರೆ. ಇನ್ನು ಅವರು, ಇಲ್ಲೇ ವೇದಾಂತ ಅಧ್ಯಯನ ನಿರತರಾಗಿರುವ ಚಿತ್ರಾಪುರ ಮಠದ ಯತಿಗಳಾದ ಶ್ರೀವಿದ್ಯೇಂದ್ರತೀರ್ಥರೊಂದಿಗೆ ಕಲಿಕೆಯನ್ನು ಮುಂದುವರಿಸಲಿ ದ್ದಾರೆ ಎಂದರು.

ಪುತ್ತಿಗೆ ಮಠವು ವಿಶ್ವದಾದ್ಯಂತ ಹಿಂದು ಧರ್ಮಪ್ರಚಾರ ನಡೆಸುತ್ತಿದೆ. ಈಗ ವಿದೇಶಗಳಲ್ಲಿ 11 ಕಡೆಗಳಲ್ಲಿ (ಅಮೆರಿಕ-7, ಆಸ್ಟ್ರೇಲಿಯ-2,ಲಂಡನ್-1, ಕೆನಡಾ-1) ಶಾಖಾ ಮಠಗಳಿವೆ. ಇದನ್ನು 182 ದೇಶಗಳಿಗೂ ವಿಸ್ತರಿಸಬೇಕೆಂಬ ಹೆಬ್ಬಯಕೆ ಇದೆ. ಕಿರಿಯರೊಂದಿಗೆ ಸಮನ್ವಯದಿಂದ ನಾವು ಈ ಕಾರ್ಯ ನಡೆಸಲಿದ್ದೇವೆ ಎಂದು ಶ್ರೀಸುಗುಣೇಂದ್ರತೀರ್ಥಶ್ರೀ ತಿಳಿಸಿದರು.

ಸನ್ಯಾಸಾಶ್ರಮ ಸ್ವೀಕಾರ ಕಾರ್ಯಕ್ರಮದಲ್ಲಿ ಶ್ರೀಚಿತ್ರಾಪುರ ಸಂಸ್ಥಾನದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಅಷ್ಟಮಠದ ಪುರೋಹಿತ ರಾದ ವೇ.ಮೂ. ಹೆರ್ಗ ವೇದವ್ಯಾಸ ಭಟ್‌ರ ನೇತೃತ್ವದಲ್ಲಿ ಮೂರು ದಿನಗಳ ಸಾಂಪ್ರದಾಯಿಕ, ಧಾರ್ಮಿಕ ಹಾಗೂ ವೈದಿಕ ಕಾರ್ಯಕ್ರಮಗಳು ಸಂಪನ್ನ ಗೊಂಡವು.

ವಿದ್ವಾಂಸರಾದ ಪಂಜ ಭಾಸ್ಕರ ಭಟ್, ಚಿಪ್ಪಗಿರಿ ನಾಗೇಂದ್ರ ಆಚಾರ್ಯ, ಡಾ.ಎನ್.ವೆಂಕಟೇಶಾಚಾರ್ಯ ಬೆಂಗಳೂರು, ಡಾ.ರಾಮನಾಥ ಆಚಾರ್ಯ ಉಡುಪಿ ಮೊದಲಾದ ವಿದ್ವಾಂಸರು ಭಾಗವಹಿಸಿದ್ದರು. ಉಡುಪಿ ಶಾಸಕರಾದ ಕೆ.ರಘುಪತಿ ಭಟ್ ಹಾಗೂ ಕಾಪು ಶಾಸಕ ಲಾಲಾಜಿ ಮೆಂಡನ್ ಶಿಷ್ಯ ಸ್ವೀಕಾರ ಮತ್ತು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಂಜಿನಿಯರಿಂಗ್‌ನಿಂದ ಸನ್ಯಾಸಾಶ್ರಮದವರೆಗೆ....

ಕುಂಜಿಬೆಟ್ಟು ಗುರುರಾಜ ಆಚಾರ್ಯ ಹಾಗೂ ವಿನುತಾ ಆಚಾರ್ಯ ದಂಪತಿಗಳ ಇಬ್ಬರು ಪುತ್ರರಲ್ಲಿ ಹಿರಿಯರಾದ ಪ್ರಶಾಂತ ಆಚಾರ್ಯ, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ದುಡಿಯುತಿದ್ದರೂ, ಆದ್ಯಾತ್ಮದತ್ತ ಸೆಳೆತದಿಂದ ಅದನ್ನು ತೊರೆದು ಬಂದು ಇದೀಗ ಸನ್ಯಾಸವನ್ನು ಸ್ವೀಕರಿಸಿ ಪುತ್ತಿಗೆ ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.

ಕುಂಜಿಬೆಟ್ಟು ಗುರುರಾಜ ಆಚಾರ್ಯ ಹಾಗೂ ವಿನುತಾ ಆಚಾರ್ಯ ದಂಪತಿಗಳ ಇಬ್ಬರು ಪುತ್ರರಲ್ಲಿ ಹಿರಿಯರಾದ ಪ್ರಶಾಂತ ಆಚಾರ್ಯ, ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಬೆಂಗಳೂರಿನಲ್ಲಿ ದುಡಿಯುತಿದ್ದರೂ, ಆದ್ಯಾತ್ಮದತ್ತ ಸೆಳೆತದಿಂದ ಅದನ್ನು ತೊರೆದು ಬಂದು ಇದೀಗ ಸನ್ಯಾಸವನ್ನು ಸ್ವೀಕರಿಸಿ ಪುತ್ತಿಗೆ ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದಾರೆ.

ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಇಂದ್ರಾಳಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಅಳಕೆ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ಶಿಕ್ಷಣವನ್ನು ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ಪಡೆದ ಪ್ರಶಾಂತ ಆಚಾರ್ಯ, ಇಂಜಿನಿಯರಿಂಗ್ ಶಿಕ್ಷಣವನ್ನು ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ (ಇ ಎಂಡ್ ಸಿ) ಪಡೆದಿದ್ದರು.

ಕಳೆದ ಐದಾರು ವರ್ಷಗಳಿಂದ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕತೆ ಹೆಚ್ಚು ಸೆಳೆಯುತಿದ್ದು, ಶ್ರೀಕೃಷ್ಣ-ಮುಖ್ಯಪ್ರಾಣರ ಪೂಜೆ ಮಾಡುವ ಹಂಬಲ ಮೂಡಿತ್ತು. ಹೀಗಾಗಿ ಪುತ್ತಿಗೆ ಶ್ರೀಗಳಿಗೆ ತನ್ನ ಮನದಿಂಗಿತ ಹೇಳಿದ್ದೆ. ದೇವರ, ಹೆತ್ತವರ ಹಾಗೂ ಗುರುಹಿರಿಯರ ಆಶೀರ್ವಾದದಿಂದ ನನ್ನ ಬಯಕೆ ಈಡೇರಿದೆ ಎಂದು ಅವರು ನುಡಿದರು.

ಯತಿಗಳಿಗೆ ಅಗತ್ಯವಿರುವ ವೇದಾಂತ ಶಿಕ್ಷಣವನ್ನು ಇಲ್ಲೇ ಮುಂದುವರಿಸುವು ದಾಗಿ ಹೇಳಿದ ಅವರು, ಗುರುಗಳು ನನ್ನ ಮೇಲಿಟ್ಟ ನಂಬಿಕೆಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News