ನೀರಿನ ರೇಶನಿಂಗ್ ಕೈ ಬಿಡಲು ಐವನ್ ಆಗ್ರಹ

Update: 2019-04-22 16:08 GMT

ಮಂಗಳೂರು, ಎ.22: ತುಂಬೆಯ ನೇತ್ರಾವತಿ ಡ್ಯಾಂನಲ್ಲಿ 5.28 ಮೀಟರ್ ನೀರಿದ್ದು ಇನ್ನೊಂದು ತಿಂಗಳು ನೀರು ಪೂರೈಕೆಗೆ ಯಾವುದೇ ಅಡ್ಡಿಯಿಲ್ಲ. ಹಾಗಾಗಿ ತಕ್ಷಣ ನೀರಿನ ರೇಶನಿಂಗ್ ಪದ್ಧತಿಯನ್ನು ಕೈ ಬಿಟ್ಟು, ಎರಡು ದಿನಕ್ಕೊಮ್ಮೆ ನೀರು ಬಿಡುವಂತೆ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಪೊರೇಟರ್‌ಗಳು, ಮಾಜಿ ಶಾಸಕರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರೇಶನಿಂಗ್ ಪದ್ಧತಿ ಕೈ ಬಿಡುವಂತೆ ಆಗ್ರಹಿಸಿದ್ದೇವೆ. ರೇಶನಿಂಗ್ ಪದ್ಧತಿ ಒಳ್ಳೆಯದಾದರೂ ಕೂಡ ನೀರು ಸಂಪೂರ್ಣ ಸ್ಥಗಿತಗೊಳಿಸುವ ಬದಲು ಎರಡು ದಿನಕ್ಕೊಮ್ಮೆ 2 ಪಂಪ್, 1 ದಿನ ಸಿಂಗಲ್ ಪಂಪ್ ಚಾಲನೆ ಮಾಡಿ ನೀರು ಬಿಟ್ಟರೆ ನಗರದ ನೀರಿನ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಆದರೆ ಈಗ ಇರುವ 4-3 ಮಾದರಿಯ ರೇಶನಿಂಗ್‌ನಿಂದ ಸಾರ್ವಜನಿಕರಿಗೆ ಮತ್ತು ತಾಂತ್ರಿಕವಾಗಿ ಪೈಪ್‌ಗಳಲ್ಲಿ ಗಾಳಿ ತುಂಬಿ ಸಮಸ್ಯೆಯಾಗಲಿದೆ. ಇದನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿದೆ. ಇಂಜಿನಿಯರ್‌ಗಳಲ್ಲಿ ಮಾತನಾಡಿ ಈ ಬಗ್ಗೆ ಸೂಕ್ತವಾಗಿ ಸ್ಪಂದಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ ಎಂದರು.

ರಾಜಕಾರಣ ಮಾಡಬೇಡಿ: ಶಾಸಕ ವೇದವ್ಯಾಸ ಕಾಮತ್ ಅವರು ರಾಜಕೀಯ ಕಾರಣಕ್ಕೆ ನೀರಿನ ವಿಷಯದಲ್ಲಿ ಆರೋಪ ಹೊರಿಸುವುದು ಸರಿಯಲ್ಲ. ಶಾಸಕರಾದ ಮೇಲೆ ಎಷ್ಟು ಸರಿ ತುಂಬೆ ಡ್ಯಾಂಗೆ ಭೇಟಿ ನೀಡಿದ್ದಾರೆ?. ನೀರು ಸಮಸ್ಯೆಯಾಗುವ ಮುನ್ನ ಯಾಕೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿಲ್ಲ? ಅದು ಶಾಸಕರ ಜವಾಬ್ದಾರಿ ಅಲ್ಲವೇ? ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಹಕರಿಸುವ ಬದಲು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಕೈಗಾರಿಕೆಗೆ ನೀರು ಕಡಿತ: ನಗರಕ್ಕೆ ನೀರು ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಂಆರ್‌ಪಿಎಲ್ ಮತ್ತು ಎಸ್‌ಇಝೆಡ್‌ಗೆ 23ಎಂಜಿಡಿ ನೀರು ನೀಡುವ ಬದಲು 10ಎಂಜಿಡಿ ನೀರು ನೀಡಲಾಗುತ್ತಿದೆ, ಎಂಸಿಎ್ಗೆ 2 ಎಂಜಿಡಿ ಮಾತ್ರ ಸರಬರಾಜಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಭಾಸ್ಕರ್ ಕೆ. ಶಶಿಧರ್ ಹೆಗ್ಡೆ, ಜೆಸಿಂತಾ ಅಲ್ಫ್ರೆಡ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಕಾರ್ಪೊರೇಟರ್ ನವೀನ್ ಡಿಸೋಜ, ಆಶಾ ಡಿಸಿಲ್ವಾ ಉಪಸ್ಥಿತರಿದ್ದರು.

‘ಪ್ರಾಕೃತಿಕ ಅಸಮತೋಲನ ಅಧ್ಯಯನ ಆಗಬೇಕು’

ಕರಾವಳಿಯಲ್ಲಿ ಹಲವು ವರ್ಷಗಳಿಂದೀಚೆಗೆ ಪ್ರಾಕೃತಿಕ ಸಮತೋಲನವನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಐವನ್ ಡಿಸೋಜ, ಪ್ರಾಕೃತಿಕ ಅಸಮತೋಲನವಾಗಬೇಕು ಎಂಬುದು ಒಳ್ಳೆಯ ಸಲಹೆ. ಈ ಬಗ್ಗೆ ಗಮನಹರಿಸಲಾಗುವುದು. ಕರಾವಳಿಯ ಹವಾಮಾನ ಬದಲಾವಣೆಯಾದ ಕಾರಣ ಹೈದರಾಬಾದ್ ಕರ್ನಾಟಕ ಮಾದರಿಯಲ್ಲೇ ಬೆಳಗ್ಗೆ 8ರಿಂದ 1 ಗಂಟೆಯವರೆಗೆ ಶಾಲೆ-ಕಾಲೇಜು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News