ಪ್ರಣಾಳಿಕೆ ವಾಪಸ್ ಪಡೆದು ಕಾಂಗ್ರೆಸ್ ಕ್ಷಮೆ ಯಾಚಿಸಲಿ: ಸಿ.ಟಿ.ರವಿ

Update: 2019-04-22 14:47 GMT

ಮಂಗಳೂರು, ಎ.22: ದೇಶದ್ರೋಹದ ಕಾನೂನನ್ನು ಸಡಿಲಗೊಳಿಸುವ ಮತ್ತು ಕಾಶ್ಮೀರದಲ್ಲಿ ಸೈನಿಕರಿಗೆ ನೀಡಿದ ಪರಮಾಧಿಕಾರವನ್ನು ಹಿಂದಕ್ಕೆ ಪಡೆಯುವ ಕಾಂಗ್ರೆಸ್ ಪ್ರಣಾಳಿಕೆಯು ದೇಶದಲ್ಲಿ ಮತ್ತೆ ಆಂತಕವಾದ ಹೆಚ್ಚಿಸಲು ನೆರವಾಗಬಹುದು. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಕ್ಷಣ ತನ್ನ ಪ್ರಣಾಳಿಕೆಯನ್ನು ಹಿಂದಕ್ಕೆ ಪಡೆದು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ. ಆಗ್ರಹಿಸಿದ್ದಾರೆ.

ನಗರದ ಬಿಜೆಪಿ ಚುನಾವಣೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಗಿಂತಲೂ ಬಿಜೆಪಿ ಆಡಳಿತದ ಅವಧಿಯಲ್ಲಿ ದೇಶ ಸುರಕ್ಷಿತವಾಗಿದೆ. ಕಾಶ್ಮೀರ ಮತ್ತು ಛತ್ತೀಸ್‌ಘಡ ಹೊರತುಪಡಿಸಿದರೆ ದೇಶದ ಬೇರೆಲ್ಲೂ ಭಯೋತ್ಪಾದಕರ ಮತ್ತು ನಕ್ಸಲರ ದಾಳಿ ನಡೆದಿಲ್ಲ. ಹೀಗಿರುವಾಗ ಕಾಂಗ್ರೆಸ್‌ನ ಪ್ರಣಾಳಿಕೆ ಭಯೋತ್ಪಾದನಾ ಚಟುವಟಿಕೆಗಳಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿದಂತಾಗಲಿದೆ. ಹಾಗಾಗಿ ತಕ್ಷಣ ಪ್ರಣಾಳಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಐಟಿ ದಾಳಿ ನಡೆದಾಗ ರಾಜ್ಯದಲ್ಲಿ ಮೈತ್ರಿ ಕೂಟಗಳು ಒಟ್ಟಾಗಿ ಬೀದಿಗೆ ಬಂದು ಹೋರಾಟ ನಡೆಸಿದ್ದವು. ಐಟಿ ದಾಳಿ ಭಯೋತ್ಪಾದನಾ ದಾಳಿಯಂತೆ ಬಿಂಬಿಸಲಾಯಿತು. ಅಕ್ರಮ ಹಣ ಸಂಪಾದನೆಯೇ ಎರಡೂ ಪಕ್ಷದ ನಾಯಕರ ಅಜೆಂಡಾ ಆಗಿರುವುದು ಗುಟ್ಟಾಗಿ ಉಳಿದಿಲ್ಲ. ಇದಕ್ಕಾಗಿಯೇ ಈ ಪಕ್ಷಗಳ ಬೆಂಬಲಿಗರ, ಗುತ್ತಿಗೆದಾರರ ಮನೆಗಳ ಮೇಲೆ ಐಟಿ ದಾಳಿ ನಡೆದಿದೆ. ರಾಜ್ಯದ ಐದು ಪ್ರಮುಖ ಕಾಮಗಾರಿಗಳ ಕಂಪ್ಲೀಷನ್ ಸರ್ಟಿಫಿಕೇಟ್ ಬಾರದೆ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಈ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು ಎಂದು ಸಿ.ಟಿ.ರವಿ ತಿಳಿಸಿದರು.

ರಾಹುಲ್ ಗಾಂಧಿಯ ಪೌರತ್ವ ವಿಚಾರದಲ್ಲಿ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು. ಎರಡು ಬೇರೆ ಬೇರೆ ಹೆಸರುಗಳಲ್ಲಿ ರಾಹುಲ್ ಗಾಂಧಿ ದಾಖಲೆ ಹೊಂದಿರುವ ಬಗ್ಗೆ ದಾಖಲೆಗಳಿವೆ. ಈ ಎರಡು ಜನ ಒಬ್ಬರೇ ಎಂಬ ಬಗ್ಗೆ ದೇಶದ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಯನ್ನು ಏಕವಚನದಲ್ಲಿ ನಿಂದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರದ್ದು ಯಾವ ಸಂಸ್ಕೃತಿ ಎಂದು ತಿಳಿಯಬೇಕಿದೆ. ಕುಂಕುಮ ಇಟ್ಟ ಜನರನ್ನು ಕಂಡರೆ ಭಯವಾಗುತ್ತದೆ ಎಂದು ಹಿಂದೆ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈಗ ರಾಹುಲ್ ಗಾಂಧಿ ಹೋದಲ್ಲೆಲ್ಲ ಹಣೆಗೆ ಉದ್ದುದ್ದ ನಾಮ ಇಟ್ಟುಕೊಂಡು ತಿರುಗಾಡುತ್ತಿರುವುದರಿಂದ ಭಯ ಆಗುವುದಿಲ್ಲವೇ? ಎಂದು ವ್ಯಂಗ್ಯವಾಡಿದರು.

ಮೋದಿ ಹೆಸರಲ್ಲಿ ಮತ ಕೇಳುವುದು ಅಪಾಯ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿ.ಟಿ.ರವಿ, ಪ್ರಭಾಕರ ಭಟ್ ತನ್ನ ಹೇಳಿಕೆಯಲ್ಲಿ ಮೋದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಯಾವತ್ತೂ ವ್ಯಕ್ತಿ ಪೂಜೆ ಮಾಡಿಲ್ಲ. ವ್ಯಕ್ತಿತ್ವದ ಪೂಜೆ ಮಾಡುತ್ತದೆ. ಹಾಗಾಗಿ ಪ್ರಭಾಕರ ಭಟ್ ಈ ಹೇಳಿಕೆ ನೀಡಿರಬಹುದು ಎಂದು ಸಮರ್ಥಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ, ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಕಿಶೋರ್, ಸಂಜಯ್ ಪ್ರಭು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News