×
Ad

ಕಲಾಭಿರುಚಿಯಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯ: ಪುನರೂರು

Update: 2019-04-22 21:34 IST

ಉಡುಪಿ, ಎ.22: ಮಕ್ಕಳಿಗೆ ಕೇವಲ ಓದುವ ಒತ್ತಡ ಹಾಕದೆ ರಜಾ ಸಮಯದಲ್ಲಿ ನಾಟಕ, ಯಕ್ಷಗಾನಗಳಂತಹ ಕಲೆಗಳಲ್ಲಿ ಅಭಿರುಚಿ, ಆಸಕ್ತಿ ಮೂಡಿಸುವ ಕಾರ್ಯವನ್ನು ಪೋಷಕರು ಮಾಡಬೇಕು. ಇದರಿಂದ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದ್ದಾರೆ.

ಉಡುಪಿ ರಂಗಭೂಮಿ ವತಿಯಿಂದ ದಿ.ಕುತ್ಪಾಡಿ ಆನಂದ ಗಾಣಿಗರ ಸ್ಮರಣಾರ್ಥ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸೋಮ ವಾರ ನಡೆದ ಮೂರು ದಿನಗಳ ‘ಆನಂದೋತ್ಸವ- 2019’ರ ಸಮಾರೋಪ ಸಮಾರಂಭದಲ್ಲಿ ಅವು ಸಮಾರೋಪ ಭಾಷಣ ಮಾಡಿದರು.

90 ಅಂಕ ಗಳಿಸಿ ಮಕ್ಕಳಿಗೆ ಹೆಚ್ಚುವರಿ ಟ್ಯುಶನ್ ನೀಡಿ ಶೇ.100 ಫಲಿತಾಂಶ ಪಡೆಯುವುದು ದೊಡ್ಡ ಸಾಧನೆಯಲ್ಲ. ಶೇ.60 ಅಂಕ ಗಳಿಸಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಶೇ.100 ಫಲಿತಾಂಶ ಪಡೆಯುವುದೇ ದೊಡ್ಡ ಸಾಧನೆ. ಅಂತಹ ಶಿಕ್ಷಣ ಸಂಸ್ಥೆಗಳಿಗೆ ಸುವರ್ಣ ಪದಕ ನೀಡಿ ಗೌರವಿಸಬೇಕು ಎಂದು ಅವರು ತಿಳಿಸಿದರು.

ಉಡುಪಿಯ ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ರವಿರಾಜ ನಾರಾ ಯಣ ಮಾತನಾಡಿ, ನೀರಿನ ಅಭಾವ ದಿನೇ ದಿನೇ ಉಲ್ಭಣಗೊಳ್ಳುತ್ತಿದೆ. ಮುಂದೆ ಯುದ್ಧ ನಡೆದರೆ ಅದು ನೀರಿಗಾಗಿ ಆಗಿರಬಹುದು. ಮಣಿಪಾಲ ಪರಿಸರದಲ್ಲಿ ಸುಮಾರು 143 ಪ್ರಬೇಧದ ಪಕ್ಷಿಗಳಿವೆ. ಬಿಸಿಲ ದಗೆಯ ಪರಿಣಾಮ ಬಾಯರಿಕೆ ಯಿಂದ ಸಾಕಷ್ಟು ಪಕ್ಷಿಗಳು ಸಾಯುತ್ತಿವೆ. ಆದುದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಎದುರು ಪಾತ್ರೆಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಇಡುವ ಪುಣ್ಯ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಸುಮನಸ ಕೊಡವೂರು ಅಧ್ಯಕ್ಷ ಪ್ರಕಾಶ್ ಕೊಡವೂರು ಮಾತನಾಡಿದರು. ರಂಗಭೂಮಿ ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್, ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ವಿಜಯ ಬ್ಯಾಂಕಿನ ಏಜಿಎಂ ಕೆ.ಎಂ. ಶೇಖರ್ ಉಪಸ್ಥಿತರಿದ್ದರು.

ರಂಗಭೂಮಿ ಉಪಾಧ್ಯಕ್ಷ ನಂದ ಕುಮಾರ್ ಎಂ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಂಗಾಯಣ ಮೈಸೂರು ತಂಡದಿಂದ ‘ಯಹೂದಿ ಹುಡುಗಿ’ ನಾಟಕ ಪ್ರದರ್ಶನಗೊಂಡಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News