ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ: ಮೃತ ರಝೀನಾರ ಅಂತ್ಯ ಸಂಸ್ಕಾರ

Update: 2019-04-22 16:42 GMT

ಮಂಗಳೂರು, ಎ. 22: ಶ್ರೀಲಂಕಾದ ರಾಜಧಾನಿ ಕೊಲಂಬೋ ಸಮೀಪದ ಶಾಂಗ್ರಿಲ್ಲಾ ಹೋಟೆಲ್‌ನಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬೈಕಂಪಾಡಿಯ ಕುಕ್ಕಾಡಿ ಕುಟುಂಬದ ರಝೀನಾ ಖಾದರ್ ಅವರ ದಫನ ಕಾರ್ಯವು ಕೊಲಂಬೋದ ಮಸೀದಿಯ ಆವರಣದಲ್ಲಿ ಸೋಮವಾರ ನೆರವೇರಿತು.

ಈ ಸಂದರ್ಭ ರಝೀನಾರ ಪತಿ ವೃತ್ತಿಯಲ್ಲಿ ಕೆಮಿಕಲ್ ಇಂಜಿನಿಯರ್ ಆಗಿರುವ ಅಬ್ದುಲ್ ಖಾದರ್ ಮತ್ತವರ ಸಂಬಂಧಿಕರು ಉಪಸ್ಥಿತರಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾಸರಗೋಡು ಸಮೀಪದ ಮೊಗ್ರಾಲ್ ಮೂಲದ ರಝೀನಾ ಶ್ರೀಲಂಕಾ ನಿವಾಸಿಯಾಗಿದ್ದರು. ಕುಕ್ಕಾಡಿ ಕುಟುಂಬದ ಅಬ್ದುಲ್ ಖಾದರ್‌ರನ್ನು ವಿವಾಹವಾದ ಬಳಿಕ ಮಂಗಳೂರು ಸಮೀಪದ ಸುರತ್ಕಲ್ ಬಳಿ ವಾಸವಾಗಿದ್ದರು. ಆದಾಗ್ಯೂ ರಝೀನಾ-ಖಾದರ್ ದಂಪತಿ ಆಗಾಗ ಶ್ರೀಲಂಕಾಕ್ಕೆ ತೆರಳಿ ಕೆಲವು ದಿನ ಕಳೆಯುತ್ತಿದ್ದರು.

ಇತ್ತೀಚೆಗೆ ಖಾದರ್ ಮತ್ತು ರಝೀನಾ ಶ್ರೀಲಂಕಾಕ್ಕೆ ತೆರಳಿದ್ದರು. ರವಿವಾರ ಬೆಳಗ್ಗೆ ಖಾದರ್ ದುಬೈಗೆ ಪ್ರಯಾಣ ಬೆಳೆಸಿದ್ದರೆ, ರಝೀನಾ ಕೊಲಂಬೋದಿಂದ ವಿಮಾನದಲ್ಲಿ ಬೆಂಗಳೂರು ಮೂಲಕ ಮಂಗಳೂರಿಗೆ ಬರುವವರಿದ್ದರು. ಈ ವಿಮಾನ ರವಿವಾರ ಮಧ್ಯಾಹ್ನ ಹೊರಡಲಿರುವುದರಿಂದ ರಝೀನಾ ಕೊಲಂಬೋದ ಹೊಟೇಲಿನಲ್ಲಿ ತಂಗಿದ್ದ ವೇಳೆ ಬಾಂಬ್ ಸ್ಪೋಟವಾಗಿತ್ತು. ಈ ದುರಂತದಲ್ಲಿ ರಝೀನಾ ಮೃತಪಟ್ಟಿದ್ದರು.

ಸುದ್ದಿ ತಿಳಿದ ತಕ್ಷಣ ದುಬೈ ತಲುಪಿದ್ದ ಅಬ್ದುಲ್ ಖಾದರ್ ರವಿವಾರವೇ ಮರಳಿ ಕೊಲಂಬೋ ಸೇರಿದ್ದರೆ, ಮಂಗಳೂರಿನಲ್ಲಿದ್ದ ಕುಟುಂಬಸ್ಥರ ಪೈಕಿ ಕೆಲವು ಮಂದಿ ಕೂಡ ಕೊಲಂಬೋಕ್ಕೆ ತೆರಳಿದ್ದರು. ಅಮೇರಿಕಾದಲ್ಲಿದ್ದ ಇಬ್ಬರು ಮಕ್ಕಳು ಸೋಮವಾರ ಸಂಜೆಯ ವೇಳೆ ಕೊಲಂಬೋ ತಲುಪಿ ದ್ದರು. ಈ ಮಧ್ಯೆ ಕುಟುಂಬಸ್ಥದ ಸದಸ್ಯರ ಸಮ್ಮುಖ ಸೋಮವಾರ ಬೆಳಗ್ಗೆ ದಫನ ಕಾರ್ಯ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News