ಶಾಸಕರಿಂದ ತುಂಬೆ, ಶಂಭೂರು ಎಎಂಆರ್ ಪ್ರಾಜೆಕ್ಟ್ ಡ್ಯಾಮ್ ಪರಿಶೀಲನೆ

Update: 2019-04-22 17:02 GMT

ಮಂಗಳೂರು, ಎ. 22: ನಗರದಲ್ಲಿ ಕುಡಿಯುವ ನೀರಿಗೆ ರೇಶನಿಂಗ್ ಆರಂಭವಾದ ಹಿನ್ನೆಲೆಯಲ್ಲಿ ನೀರು ಪೂರೈಕೆಯಾಗುವ ತುಂಬೆ ಡ್ಯಾಮ್ ಪ್ರದೇಶ ಮತ್ತು ಶಂಭೂರು ಎಎಂಆರ್ ಪ್ರಾಜೆಕ್ಟ್ ಡ್ಯಾಮ್ ಪ್ರದೇಶಕ್ಕೆ ಶಾಸಕರಾದ ವೇದವ್ಯಾಸ ಡಿ. ಕಾಮತ್, ಡಾ. ಭರತ್ ವೈ ಶೆಟ್ಟಿ ಮತ್ತು ಮಾಜಿ ಕಾರ್ಪೊರೇಟರ್‌ಗಳು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುಂಬೆ ಡ್ಯಾಮ್‌ನಲ್ಲಿ ಸದ್ಯ 5.18ಮೀಟರ್ ನೀರು ಸಂಗ್ರಹವಾಗಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಇಳಿಕೆಯಾಗುವುದು ಮತ್ತು ನೀರಿನ ಒಳಹರಿವು ಇಲ್ಲದಿರುವುದನ್ನು ಡ್ಯಾಮ್ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ಎಎಂಆರ್‌ಗೆ ಭೇಟಿ: ಶಾಸಕರು, ಕಾರ್ಪೊರೇಟರ್‌ಗಳ ತಂಡ ಬಳಿಕ ಶಂಭೂರು ಎಎಂಆರ್ ಡ್ಯಾಂ ಪ್ರದೇಶಕ್ಕೆ ತೆರಳಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಈ ಸಂದರ್ಭ ಅಧಿಕಾರಿಗಳು ‘ಎ.9ರಂದು ಜಿಲ್ಲಾಧಿಕಾರಿಗಳ ಸೂಚನೆ ಮೇರೆ ಎಎಂಆರ್‌ನಿಂದ ನೀರು ಬಿಟ್ಟಿದ್ದು, ಇದರಿಂದ ತುಂಬೆ ಡ್ಯಾಂನಲ್ಲಿ ನೀರು ಪ್ರಮಾಣ 6 ಮೀಟರ್‌ಗೆ ಹೆಚ್ಚಳವಾಗಿತ್ತು. ಈಗ ಎಎಂಆರ್‌ಗೆ ನೀರಿನ ಒಳಹರಿವು ಸಂಪೂರ್ಣ ನಿಂತುದರಿಂದ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ’ ಎಂದರು.

ಶಂಭೂರು ಎಎಂಆರ್ ಅಣೆಕಟ್ಟೆಯಲ್ಲಿ ಜೂನ್‌ನಿಂದ ಫೆಬ್ರವರಿ ತನಕ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದು, ಉಳಿದಂತೆ ಮಾ.22 ಮತ್ತು ಎ.9ರಂದು ಎಎಂಆರ್ ಅಣೆಕಟ್ಟೆಯಲ್ಲಿ ಸಂಗ್ರಹಗೊಂಡ ನೀರನ್ನು ನದಿಗೆ ಬಿಡುಗಡೆಗೊಳಿಸಲಾಗಿದೆ. ಇದೀಗ ಮತ್ತೆ ಉಳಿಕೆ ನೀರು ಕೂಡಾ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಉಳಿದಂತೆ ಸೆಝ್ ಮತ್ತು ಎಂಆರ್‌ಪಿಎಲ್ ಕೈಗಾರಿಕಾ ಸಂಸ್ಥೆಗಳು ನೀರು ಮೇಲೆತ್ತುತ್ತಿರುವ ಬಗ್ಗೆಯೂ ಗಮನಿಸಲಾಗುತ್ತದೆ ಎಂದರು.

ರೇಶನಿಂಗ್ ನಿಲ್ಲಿಸಿ: ಎರಡು ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಶಾಸಕ ವೇದವ್ಯಾಸ ಕಾಮತ್ ಸುದ್ದಿಗಾರೊಂದಿಗೆ ಮಾತನಾಡಿ ‘ಹಿಂದೆ ಡ್ಯಾಮ್ 4 ಮೀಟರ್ ಇದ್ದಾಗಲೂ ರೇಶನಿಂಗ್ ಮಾಡುತ್ತಿರಲಿಲ್ಲ. ಈಗ 5 ಮೀಟರ್‌ಗಿಂತ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ಅಧಿಕಾರಿಗಳು ಏಕಾಏಕಿ ರೇಶನಿಂಗ್ ಆರಂಭಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆದುದರಿಂದ ಕೂಡಲೇ ರೇಶನಿಂಗ್ ನಿಲ್ಲಿಸಬೇಕು, ಎಲ್ಲರಿಗೂ ನೀರು ಸಿಗುವಂತಾಗಬೇಕು. ಅದಕ್ಕಾಗಿ ಮಂಗಳವಾರ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಚರ್ಚಿಸಲಾಗುವುದು’ ಎಂದರು.

ತಂಡದಲ್ಲಿ ಬಿಜೆಪಿ ಮುಖಂಡ ರವಿಶಂಕರ್ ಮಿಜಾರು, ನಿತಿನ್ ಕುಮಾರ್, ನವೀನ್‌ಚಂದ್ರ, ಪ್ರೇಮಾನಂದ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಸುಧೀರ್ ಕುಮಾರ್ ಕಣ್ಣೂರು, ರಾಜೇಶ್, ಸುರೇಂದ್ರ, ರೂಪಾ ಡಿ. ಬಂಗೇರಾ, ಜಯಂತಿ ಆಚಾರ್, ಪೂರ್ಣಿಮಾ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News