ಕೇಂದ್ರದ ಅಪ್ರೆಂಟಿಸ್‌ ಯೋಜನೆಗೂ ಹಿನ್ನಡೆ: ನಿರೀಕ್ಷಿತ ಗುರಿಯ ಶೇ.15ರಷ್ಟು ಮಾತ್ರ ಸಫಲ

Update: 2019-04-22 17:21 GMT
ಸಾಂದರ್ಭಿಕ ಚಿತ್ರಾ

ಹೊಸದಿಲ್ಲಿ,ಎ.22: ಕೇಂದ್ರ ಸರಕಾರದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಉತ್ತೇಜನ ಯೋಜನೆ (ಎನ್‌ಎಪಿಎಸ್)ಯಡಿ, ಕೇವಲ 47.358 ಕಂಪೆನಿಗಳು ಮಾತ್ರವೇ ನೋಂದಾಯಿಸಿಕೊಂಡಿರುವುದಾಗಿ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತಾ ಸಚಿವಾಲಯದ ತರಬೇತಿ ಮಹಾನಿರ್ದೇಶನಾಲಯದಿಂದ ದೊರೆತ ಆರ್‌ಟಿಐ ಮಾಹಿತಿಯಿಂದ ಬೆಳಕಿಗೆ ಬಂದಿದೆ.

ಈ ಯೋಜನೆಯಡಿ 4.09 ಲಕ್ಷ ಉದ್ಯೋಗಗಳು ಅಪ್ರೆಂಟಿಸ್‌ಶಿಪ್ (ಸುಶಿಕ್ಷು)ಗಾಗಿ ಅರ್ಜಿ ಸಲ್ಲಿಸಿದ್ದರು. ಆದಾಗ್ಯೂ, ಆರ್‌ಟಿಐ ಅರ್ಜಿಯಡಿ ಸರಕಾರದಿಂದ ಲಭ್ಯವಾದ ಉತ್ತರದ ಪ್ರಕಾರ ಕೇವಲ 2.9 ಲಕ್ಷ ವಿದ್ಯಾರ್ಥಿಗಳು ಮಾತ್ರವೇ ಈ ಯೋಜನೆಯಡಿ  ಆಪ್ರೆಂಟಿಸ್‌ಗಳಾಗಿ ನಿಯೋಜಿತರಾಗಿದ್ದಾರೆ. ಅದರೆ ಕೇವಲ ಯೋಜಿತ ಗುರಿಯ ಕೇವಲ 15 ಶೇಕಡರಷ್ಟನ್ನು ತಲುಪಲು ಮಾತ್ರ ಇಲಾಖೆಗೆ ಸಾಧ್ಯವಾದಂತಾಗಿದೆ.

ಭಾರತ ಸರಕಾರವು 2016ರ ಆಗಸ್ಟ್ 19ರಂದು 10 ಸಾವಿರ ಕೋಟಿ ರೂ. ಮೊತ್ತದ  ಎನ್‌ಎಪಿಎಸ್ ಯೋಜನೆಗೆ ಚಾಲನೆ ನೀಡಿತ್ತು. ಅಪ್ರೆಂಟಿಸ್‌ಶಿಪ್ ತರಬೇತಿಗೆ ಉತ್ತೇಜಿಸುವುದು ಹಾಗೂ ಅಪ್ರೆಂಟಿಸ್‌ಗಳ ಕೌಶಲ್ಯತೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿತ್ತು.

25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರವು ಎನ್‌ಎಪಿಎಸ್ ಯೋಜನೆಯಡಿ 69.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಕುತೂಹಲಕರವೆಂದರೆ ಪಶ್ಚಿಮಬಂಗಾಳ, ರಾಜಸ್ಥಾನ, ತ್ರಿಪುರಾ ರಾಜ್ಯಗಳು ಈ ಯೋಜನೆ ವ್ಯಾಪ್ತಿಗೆ ಬಂದಿದ್ದವು. ಆದರೆ ಜಾರ್ಖಂಡ್, ಚತ್ತೀಸ್‌ಗಢ ಹಾಗೂ ಕರ್ನಾಟಕ ಸೇರಿದಂತೆ 11 ರಾಜ್ಯಗಳಿಗೆ ಈ ಯೋಜನೆಯಡಿ ಚಿಕ್ಕಾಸು ಹಣವೂ ದೊರೆತಿಲ್ಲವೆಂಬ ಅಂಶವೂ ಬೆಳಕಿಗೆ ಬಂದಿದೆ.

ಎನ್‌ಎಪಿಎಸ್ ಯೋಜನೆಯಡಿ ಮಹಾರಾಷ್ಟ್ರಕ್ಕೆ 33.26 ಕೋಟಿ ರೂ. ಅನುದಾನ ದೊರೆತಿದೆ. ಆದರೆ ಹರ್ಯಾಣ ಸರಕಾರವು ಇದರಲ್ಲಿ ಕೇವಲ 59.84 ಲಕ್ಷ ರೂ.ಗಳನ್ನು ಮಾತ್ರವೇ ವ್ಯಯಿಸಿದೆ. ಆ ರಾಜ್ಯದ 32 ಸಂಸ್ಥೆಗಳಲ್ಲಿನ 241 ಅಪ್ರೆಂಟಿಸ್‌ಗಳು ಮಾತ್ರವೇ ಈ ಯೋಜನೆಯ ಫಲಾನುಭವಿಗಳಾಗಿದ್ದಾರೆಂದು ವರದಿ ತಿಳಿಸಿದೆ. ಆ ರಾಜ್ಯವು ಪ್ರತಿ ಅಪ್ರೆಂಟಿಸ್‌ಗೆ ತಲಾ 24,381 ರೂ.ಗಳನ್ನು ವ್ಯಯಿಸಿದೆ.

ಮಹಾರಾಷ್ಟ್ರಕ್ಕೆ 19.76 ಕೋಟಿ ಎನ್‌ಎಪಿಎಸ್ ಅನುದಾನ ದೊರೆತಿದ್ದು, ಅದು ಪ್ರತಿ ಅಪ್ರೆಂಟಿಸ್‌ಗೆ 6385 ರೂ.ನಂತೆ ಒಟ್ಟು 2812 ಮಂದಿಗೆ 6385 ರೂ.ಗಳನ್ನು ವ್ಯಯಿಸಿದೆ. ರಾಜಸ್ಥಾನ, ಆಂಧ್ರಪ್ರದೇಶ, ಹರ್ಯಾಣ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ತಲಾ 18 ಕೋಟಿ ರೂ. ಎನ್‌ಎಪಿಎಸ್ ಅನುದಾನ ದೊರೆತಿದೆ.

ಎನ್‌ಎಪಿಎಸ್ ಯೋಜನೆಯಡಿ ಈವರೆಗೆ 70 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ, ಕೇವಲ 20 ಶೇಕಡ ಹಣವನ್ನು ಮಾತ್ರವೇ ವ್ಯಯಿಸಲಾಗಿದೆ.

2018ರ ಮಾರ್ಚ್ 31ರೊಳಗೆ 20 ಲಕ್ಷ ಅಪ್ರೆಂಟಿಸ್‌ಗಳನ್ನು ತರಬೇತುಗೊಳಿಸುವುದು ಎನ್‌ಎಪಿಎಸ್ ಯೋಜನೆಯ ಗುರಿಯಾಗಿತ್ತು. ಆದರೆ 2.9 ಲಕ್ಷ ಅಪ್ರೆಂಟಿಸ್‌ಗಳಿಗೆ ಮಾತ್ರವೇ ತರಬೇತಿ ನೀಡಲು ಸಾಧ್ಯವಾಗಿದೆ. ಅವರ ಪೈಕಿ ಕೇವಲ 17,493 ಮಂದಿ ಮಾತ್ರ ಯೋಜನೆಯ ಪ್ರಯೋಜನ ಪಡೆದಿದ್ದಾರೆಂದು ಆರ್‌ಟಿಐ ಉತ್ತರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News