ನೆಹರು, ಇಂದಿರಾ ಗಾಂಧಿಯ ದೂರದೃಷ್ಟಿಯಿಂದ ಸ್ಫೂರ್ತಿ ಪಡೆಯಿರಿ: ಮೋದಿಗೆ ಶಿವಸೇನೆ ಸಲಹೆ

Update: 2019-04-22 17:36 GMT

ಮುಂಬೈ,ಎ.22: ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಜೆಟ್ ಏರ್‌ವೇಸ್‌ನ್ನು ವಹಿಸಿಕೊಳ್ಳುವಂತೆ ಮತ್ತು ಅದರ ಸಿಬ್ಬಂದಿಗಳನ್ನು ಉದ್ಯೋಗ ನಷ್ಟದಿಂದ ರಕ್ಷಿಸುವಂತೆ ಶಿವಸೇನೆಯು ಸೋಮವಾರ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ವಿಮೆ ಮತ್ತು ವಿಮಾನಯಾನ ಸಂಸ್ಥೆಗಳನ್ನು ರಾಷ್ಟ್ರೀಕರಿಸುವ ಮೂಲಕ ಮಾಜಿ ಪ್ರಧಾನಿಗಳಾದ ಜವಾಹರಲಾಲ ನೆಹರು ಮತ್ತು ಇಂದಿರಾ ಗಾಂಧಿ ಅವರು ಪ್ರದರ್ಶಿಸಿದ್ದ ದೂರದೃಷ್ಟಿಯಿಂದ ಸ್ಫೂರ್ತಿ ಪಡೆಯುವಂತೆ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೂಚಿಸಿದೆ.

ತನ್ನ ಮುಖವಾಣಿ ‘ಸಾಮನಾ’ದ ಸಂಪಾದಕೀಯದಲ್ಲಿ ಜೆಟ್ ಏರ್‌ವೇಸ್‌ನ ತಾತ್ಕಾಲಿಕ ಮುಚ್ಚುಗಡೆಯ ಪರಿಣಾಮಗಳ ಕುರಿತು ಮಾತನಾಡಿರುವ ಶಿವಸೇನೆಯು,ನಿರುದ್ಯೋಗಿಗಳಾಗಿರುವವರ ಶಾಪವು ‘ಸಾಧ್ವಿ’ಯ ಶಾಪಕ್ಕಿಂತ ಹೆಚ್ಚು ಶಕ್ತಿಶಾಲಿಯಾಗುತ್ತದೆ ಎಂದು ಮಹಾರಾಷ್ಟ್ರ ಎಟಿಎಸ್‌ನ ಮಾಜಿ ಮುಖ್ಯಸ್ಥ ಹೇಮಂತ ಕರ್ಕರೆಯವರ ಸಾವಿನ ಕುರಿತಂತೆ ಬಿಜೆಪಿ ನಾಯಕಿ ‘ಸಾಧ್ವಿ’ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ತಿಳಿಸಿದೆ.

ಸರಕಾರವು ಈ ಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದಿರುವ ಅದು,ಹೂಡಿಕೆದಾರರು ಜೆಟ್ ಏರ್‌ವೇಸ್‌ನ ಸ್ಥಾಪಕ ಅಧ್ಯಕ್ಷ ನರೇಶ ಗೋಯಲ್ ಅವರ ನಿರ್ಗಮನಕ್ಕೆ ಆಗ್ರಹಿಸಿದ್ದರು ಮತ್ತು ಎಸ್‌ಬಿಐ ವಿಮಾನಯಾನ ಸಂಸ್ಥೆಗೆ ೫೦೦ ಕೋ.ರೂ.ಗಳ ಆರ್ಥಿಕ ನೆರವನ್ನು ನೀಡುತ್ತದೆ ಎನ್ನಲಾಗಿತ್ತು. ಆದರೆ ಗೋಯಲ್ ಅವರು ಸಂಸ್ಥೆಯಿಂದ ನಿರ್ಗಮಿಸಿದ್ದರೂ,೫೦೦ ರೂ.ಗಳನ್ನೂ ಅದರ ಸಿಬ್ಬಂದಿಗಳಿಗೆ ನೀಡಲಾಗಿಲ್ಲ ಎಂದಿದೆ.

ಜೆಟ್ ಏರ್‌ವೇಸ್‌ನ್ನು ಪತನಗೊಳಿಸಲು ತೆರೆಮರೆಯಲ್ಲಿ ಯಾವುದಾದರೂ ಕಾರ್ಪೊರೇಟ್ ಶಕ್ತಿಯ ಕೈವಾಡವಿದೆಯೇ ಎಂಬ ಶಂಕೆಯನ್ನೂ ಶಿವಸೇನೆಯು ವ್ಯಕ್ತಪಡಿಸಿದೆ.                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News