ಶಿರವಸ್ತ್ರ ತೆಗೆದು ಬಂದರೆ ಮಾತ್ರ ದಾಖಲಾತಿ ಎಂದ ಮಂಗಳೂರಿನ ಕಾಲೇಜು: ವಿದ್ಯಾರ್ಥಿನಿಯ ಆರೋಪ

Update: 2019-04-24 14:31 GMT

ಮಂಗಳೂರು, ಎ.24: ಕಳೆದ ಸಾಲಿನ ಪ್ರಥಮ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದ ವಿದ್ಯಾರ್ಥಿನಿಗೆ ಅದೇ ಕಾಲೇಜಿನಲ್ಲಿ ದ್ವಿತೀಯ ವರ್ಷಕ್ಕೆ ದಾಖಲಾತಿ ನಿರಾಕರಿಸಿದ ಘಟನೆ ನಗರದ ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಕಿಗೆ ಬಂದಿದೆ.

ಉಡುಪಿ ಜಿಲ್ಲೆಯ ಉಚ್ಚಿಲದ ವಿದ್ಯಾರ್ಥಿನಿ ಫಾತಿಮಾ ಫಾಝಿಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಅಪರ ಜಿಲ್ಲಾಧಿಕಾರಿಗೆ ದೂರು ನೀಡಿ ‘ತಾನು ಕಳೆದ ವರ್ಷ ಪ್ರಥಮ ಪಿಯು ತರಗತಿಯನ್ನು ಅತ್ಯುನ್ನತ ಶ್ರೆಣಿಯಲ್ಲಿ ತೇರ್ಗಡೆ ಹೊಂದಿದ್ದೆ. ಪ್ರಥಮ ವರ್ಷದ ಶಿಕ್ಷಣವನ್ನು ತಲೆಗೆ ಶಿರವಸ್ತ್ರ ಧರಿಸಿಯೇ ಪಡೆದಿದ್ದೆ. ಈ ಬಾರಿ ಪ್ರಥಮ ಪಿಯು ಫಲಿತಾಂಶ ಬಂದ ನಂತರ ದ್ವಿತೀಯ ಪಿಯುಗಾಗಿ ದಾಖಲಾತಿಗೆಂದು ತಾಯಿಯೊಂದಿಗೆ ಕಾಲೇಜಿಗೆ ಹೋದಾಗ ಪ್ರಾಂಶುಪಾಲರು ಶಿರವಸ್ತ್ರ ತೆಗೆದು ಬರುವುದಾದರೆ ದಾಖಲಾತಿ ಮಾಡುತ್ತೇವೆ. ಇಲ್ಲದಿದ್ದರೆ ಈ ಕಾಲೇಜಿನಲ್ಲಿ ಕಲಿಯಲು ಅವಕಾಶವಿಲ್ಲ ಎಂದಿದ್ದಾರೆ. ಆ ಬಳಿಕ ತಾನು ಹಲವು ಬಾರಿ ಪೋಷಕರೊಂದಿಗೆ ಪ್ರಾಂಶುಪಾಲರನ್ನು ಭೇಟಿಯಾಗಿ ಶಿರವಸ್ತ್ರದೊಂದಿಗೆ ದಾಖಲಾತಿಗೆ ಮನವಿ ಮಾಡಿದರೂ ಕೂಡ ಪ್ರಾಂಶುಪಾಲರು ನಿಲುವನ್ನು ಬದಲಾಯಿಸಲಿಲ್ಲ. ಕೊನೆಗೆ ಪೋಷಕರು ದಾಖಲಾತಿ ನಿರಾಕರಣೆಗೆ ಲಿಖಿತ ರೂಪದಲ್ಲಿ ಕಾರಣ ನೀಡಿ ಎಂದು ಕೇಳಿಕೊಂಡರೂ ಸ್ಪಂದಿಸದೆ ಟಸಿ ಬರೆದು ಕೊಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದೀಗ ತಾನು ತನ್ನ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುವಂತಾಗಿದ್ದು, ಈ ಬಗ್ಗೆ ಸೂಕ್ತ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಈ ಕಾಲೇಜಿನ ಪದವಿ ವಿಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ನಿಷೇಧಿಸಲಾಗಿತ್ತು. ಇದರ ವಿರುದ್ಧ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ್ದು ಭಾರೀ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News