ಕರ್ನಾಟಕಕ್ಕೆ ಇನ್ನೊಂದು ಹೆಸರೇ ರಾಜ್‌ಕುಮಾರ್: ಪ್ರದೀಪ್ ಕುರ್ಡೇಕರ್

Update: 2019-04-24 15:25 GMT

 ಉಡುಪಿ, ಎ.24: ಕರ್ನಾಟಕಕ್ಕೆ ಪರ್ಯಾಯ ಹೆಸರೇ ರಾಜ್‌ಕುಮಾರ್. ಅವರ ಪ್ರೌಢಿಮೆ, ಮೇರು ವ್ಯಕ್ತಿತ್ವ, ಅವರು ಬದುಕು ನಡೆಸಿದ ರೀತಿ ಎಲ್ಲರಿಗೂ ಮಾದರಿ ಎಂದು ಉಡುಪಿ ತಹಶೀಲ್ದಾ್ ಪ್ರದೀಪ್‌ಕುರ್ಡೇಕರ್ ಹೇಳಿದ್ದಾರೆ.

ಬುಧವಾರ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನಡೆದ ವರನಟ, ಪದ್ಮಭೂಷಣ ಡಾ.ರಾಜ್‌ಕುಮಾರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಾ.ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.

ಇಡೀ ಮನೆ ಮಂದಿ ಒಟ್ಟಾಗಿ ಕುಳಿತು ನೋಡಿ ಅನುಭವಿಸುವಂತಹ ಸದಭಿರುಚಿಯ, ಸಾಂಸಾರಿಕ ಚಿತ್ರಗಳಲ್ಲಿ ನಟಿಸಿದ ರಾಜ್‌ಕುಮಾರ್ ಅವರ ಅಭಿನಯ ಮತ್ತು ಅವರು ನಿರ್ವಹಿಸಿದ ಪಾತ್ರಗಳು ಚಿರಸ್ಮರಣಿಯ. ಅವರು ನಟಿಸಿದ ಪೌರಾಣಿಕ ಪಾತ್ರಗಳು ಪರದೆಯ ಮೇಲೆ ಜೀವಂತವೆಂಬಂತೆ ಮೂಡಿಬರುತಿದ್ದವು. ಎಲ್ಲಾ ಬಗೆಯ ಪಾತ್ರಗಳಲ್ಲೂ ನಟಿಸಿದ್ದ ಅವರು, ನಾಡು, ನುಡಿಗಾಗಿ ಕಾವೇರಿ, ಗೋಕಾಕ್ ಚಳವಳಿಯಲ್ಲೂ ಪಾಲ್ಗೊಂಡಿದ್ದರು ಎಂದು ನೆನಪಿಸಿಕೊಂಡರು.

ಡಾ.ರಾಜ್ ಅವರ ಬಹುಕಾಲದ ಒಡನಾಡಿ ಹಾಗೂ ಹಿರಿಯ ಕಲಾವಿದ ರಾದ ಹೇರೂರಿನ ದಯಾನಂದ ಶೆಟ್ಟಿ ಮಾತನಾಡಿ ಡಾ.ರಾಜ್‌ಕುಮಾರ್ ಅವರೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡರು. ಉಡುಪಿಗೆ ಭೇಟಿ ನೀಡಿದಾಗೆಲ್ಲಾ ತನ್ನನ್ನು ಹುಡುಕಿಸಿ, ಕರೆದು ಮಾತನಾಡಿದ ಬಗ್ಗೆ, ತನ್ನ ಮನೆ ನಿರ್ಮಾಣಕ್ಕೆ ನೀಡಿದ ಧನ ಸಹಾಯವನ್ನು ಸಹ ಸ್ಮರಿಸಿಕೊಂಡರು.

ಸಿನಿ ಪತ್ರಕರ್ತ ಉದಯಕುಮಾರ್ ಪೈ ಮಾತನಾಡಿ, ಕನ್ನಡ ಚಿತ್ರ ಹೆಚ್ಚು ನಿರ್ಮಾಣವಾಗದ, ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗದ ಕಾಲದಲ್ಲಿ ಹೊಟ್ಟೆಪಾಡಿಗಾಗಿ ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಹೊಸದಿಕ್ಕು ತೋರಿದ್ದಾರೆ. ಆರ್ಥಿಕ ದಾರಿದ್ರದ ನಡುವೆಯೂ ಸೃಜನಶೀಲತೆಯ ಕೊರತೆಯಿರದ ಹಿನ್ನೆಲೆಯಲ್ಲಿ ಅವಕಾಶ ಸಿಕ್ಕರೂ ಬೇರೆ ಭಾಷೆಯ ಸಿನಿಮಾಗೆ ಹೋಗದೆ ನಿರ್ಮಾಪಕರು ಕೊಟ್ಟಷ್ಟೇ ಸ್ವೀಕರಿಸಿದ ರಾಜ್, ಕಷ್ಟಗಳನ್ನು ಬದಿಗೊತ್ತಿ, ವೃತ್ತಿಪರತೆ, ಪ್ರಾಮಾಣಿಕತೆ ಮೆರೆದಿದ್ದು ತಂಡ ಸ್ಛೂರ್ತಿ ಯಿಂದ ಕೆಲಸ ಮಾಡಿದ್ದಾರೆ. ಎನ್‌ಟಿಆರ್, ಎಂಜಿಆರ್ ಸ್ನೇಹಿತರಾಗಿದ್ದರೂ ರಾಜಕೀಯ ಪ್ರವೇಶದ ಬಗ್ಗೆ ಅವರಿಗೆ ಒಲವಿರಲಿಲ್ಲ ಎಂದು ಹೇಳಿದರು.

ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ಡಾ.ರಾಜ್‌ಕುಮಾರ್ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿ ದರು. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿ, ಪ್ರಕಾಶ್ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News