ಘಾಝಿಯಾಬಾದ್‌ನಲ್ಲಿ ಪತ್ನಿ, ಮಕ್ಕಳ ಕೊಲೆ: ಆರೋಪಿ ಉಡುಪಿಯಲ್ಲಿ ಬಂಧನ

Update: 2019-04-24 18:20 GMT

ಉಡುಪಿ, ಎ.24: ಕಳೆದ ಎ. 20ರಂದು ರಾತ್ರಿ ದೆಹಲಿ ಸಮೀಪದ ಘಾಝಿಯಾಬಾದ್‌ನ ತನ್ನ ಮನೆಯಲ್ಲಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಬೆಂಗಳೂರಿನ ಟೆಕ್ಕಿಯೊಬ್ಬನನ್ನು ಉಡುಪಿಯಲ್ಲಿ ಬಂಧಿಸಿರುವ ಘಾಝಿಯಾಬಾದ್‌ ಪೊಲೀಸರು ಮಂಗಳವಾರ ಸಂಜೆ ಉತ್ತರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಸುಮಿತ್‌ ಕುಮಾರ್ (34) ಎ. 20ರ ರಾತ್ರಿ ತನ್ನ ಪತ್ನಿ ಅಶಾ ಬಾಲ (32), 4 ವರ್ಷದ ಅವಳಿ ಸೇರಿದಂತೆ ಮೂವರು ಮಕ್ಕಳನ್ನು ಕೊಲೆ ಮಾಡಿ ಅಲ್ಲಿಂದ ರೈಲಿನಲ್ಲಿ ಮುಂಬೈಗೆ ಪರಾರಿಯಾಗಿದ್ದ. ಮುಂಬೈಯಿಂದ ತಿರುವನಂತಪುರಕ್ಕೆ ತೆರಳುವ ರೈಲಿನಲ್ಲಿ ಪ್ರಯಾಣಿಸುತಿದ್ದ ಸುಮಿತ್‌ನನ್ನು ಘಾಝಿಯಾಬಾದ್‌ ಪೊಲೀಸರು ನೀಡಿದ ಮಾಹಿತಿಯಂತೆ ಉಡುಪಿಯ ಪೊಲೀಸರು ರೈಲು ಉಡುಪಿಗೆ ತಲುಪಿದಾಗ ವಶಕ್ಕೆ ಪಡೆದಿದ್ದರು.

ಬಳಿಕ ನಗರಕ್ಕೆ ಬಂದ ಸಬ್‌ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರು ಸುಮಿತ್‌ನನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೋರ್ಟಿನ ಅನುಮತಿಯಂತೆ ಆತನನ್ನು ಬಂಧಿಸಿ ನಿನ್ನೆ ಸಂಜೆ ಘಾಝಿಯಾಬಾದ್‌ಗೆ ಕರೆದೊಯ್ದರು.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೈತುಂಬಾ ಸಂಬಳ ಪಡೆಯುತಿದ್ದ ಸುಮಿತ್‌ ಕುಮಾರ್ 2011ರಲ್ಲಿ ಮದುವೆಯಾಗಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಒಳ್ಳೆಯ ಹೆಸರು ಸಂಪಾದಿಸಿದ್ದ. ಆದರೆ ಆತನಿಗೆ ಮಾದಕ ದ್ರವ್ಯಗಳ ವ್ಯಸನ ಅಂಟಿಕೊಂಡಿದ್ದು ಇದರಿಂದ ಈ ವರ್ಷ ಆತನ ಉದ್ಯೋಗಕ್ಕೂ ಸಂಚಕಾರ ಬಂದಿತ್ತು.

ಕೆಲಸವಿಲ್ಲದೇ ಘಾಝಿಯಾಬಾದ್‌ಗೆ ಸಂಸಾರವನ್ನು ಸ್ಥಳಾಂತರಿಸಿದ ಈತ ಅಲ್ಲೂ ಮಾದಕ ವ್ಯಸನಿಯಾಗಿಯೇ ಇದ್ದು, ಎ. 20ರ ರಾತ್ರಿ ಎಲ್ಲರಿಗೂ ವಿಷವನ್ನು ಯಾವುದೋ ವಸ್ತುವಿನಲ್ಲಿ ಹಾಕಿ ನೀಡಿದ್ದು, ಬಳಿಕ ಎಲ್ಲರನ್ನೂ ಕೊಂದು ಅಲ್ಲಿಂದ ಪರಾರಿಯಾಗಿದ್ದ.

ಇಂದಿರಾಪುರಂನ ತನ್ನ ಮನೆಯಿಂದ ಪರಾರಿಯಾಗುವ ಮೊದಲು ಆತ ತನ್ನ ವಾಟ್ಸಪ್‌ನ ಕುಟುಂಬದ ಗ್ರೂಪ್‌ನಲ್ಲಿ ತನ್ನ ಕೃತ್ಯದ ಕುರಿತು ಹೇಳಿಕೊಂಡಿದ್ದ, ಅಲ್ಲದೇ ಸಂಬಂಧಿಯೊಬ್ಬನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News