ಶ್ರೀಲಂಕಾ ಭಯೋತ್ಪಾದಕ ಕೃತ್ಯ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಖಂಡನೆ

Update: 2019-04-24 17:06 GMT

ಉಡುಪಿ, ಎ. 24: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ಕೃತ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಇಂತಹ ಕೃತ್ಯಗಳು ಮಾನವೀಯತೆಗೆ ಕಳಂಕವಾಗಿದ್ದು, ಪೈಶಾಚಿಕತೆಯ ವಿಜೃಂಭಣೆ ಯಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂದು ಕೇವರ ನೂರಾರು ಮನುಷ್ಯ ಜೀವಗಳ ಹರಣ ಮಾತ್ರವಷ್ಟೇ ಅಲ್ಲ, ಬದಲಾಗಿ ಮನುಷ್ಯ ಸಮುದಾಯದ ವಿಶ್ವಾಸ, ಸಹೋದರತ್ವ ಹಾಗೂ ಮನುಷ್ಯತ್ವದ ಮೇಲೆ ನೇರವಾಗಿ ನಡೆದ ಆಕ್ರಮಣವಾಗಿದೆ. ಮಾನವೀಯತೆ ಯೊಂದಿಗೆ ಸ್ವಲ್ವವಾದರೂ ಸಂಬಂಧವುಳ್ಳ ವ್ಯಕ್ತಿ ಇದನ್ನು ಒಪ್ಪಲು ಸಾಧ್ಯವೇ ಇಲ್ಲ.

ಭವಿಷ್ಯದಲ್ಲಿ ಇಂತಹ ದುರಾಕ್ರಮಣಗಳು ನಡೆಯದ ಹಾಗೆ ಶ್ರೀಲಂಕಾ ಸರಕಾರ ಮತ್ತು ಜಾಗತಿಕ ಸಮುದಾಯ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರಲ್ಲಿ ಆತ್ಮವಿಶ್ವಾಸ ಹಾಗೂ ಭರವಸೆಯನ್ನು ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜೀವಕಳೆದುಕೊಂಡವರ ಬಗ್ಗೆ ಮುಸ್ಲಿಂ ಒಕ್ಕೂಟ ತನ್ನ ಸಂತಾಪವನ್ನು ವ್ಯಕ್ತಪಡಿಸುವುದಲ್ಲದೇ ಅವರ ಕುಟುಂಬಸ್ಥರಿಗೆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತದೆ. ಅಲ್ಲದೇ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತದೆ.

ಗುರುವಾರ ಸಂಜೆ ಕ್ರೈಸ್ತಬಂಧುಗಳು ಉಡುಪಿಯ ಶೋಕಮಾತಾ ಇಗರ್ಜಿ ವಠಾರದಲ್ಲಿ ನಡೆಸುವ ಸಂತಾಪ ಸೂಚಕ ಸಭೆಯಲ್ಲಿ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೊಂದವರ ನೋವಿನಲ್ಲಿ ಭಾಗಿಗಳಾಗ ಬೇಕೆಂದು ಮತ್ತು ಭಯೋತ್ಪಾದನಾ ಕೃತ್ಯಕ್ಕೆ ವಿರೋಧ ವ್ಯಕ್ತಪಡಿಸಬೇಕೆಂದು ವಿನಂತಿಸುತ್ತೇವೆ ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟ ಹೇಳಿಕೆಯಲ್ಲಿ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News