ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಪೈಪ್ ಒಡೆದು ಲೀಟರ್ ಗಟ್ಟಲೆ ನೀರು ರಸ್ತೆ ಪಾಲು

Update: 2019-04-24 17:15 GMT

ಬಂಟ್ವಾಳ, ಎ. 24: ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪು ಲೈನ್ ಒಡೆದು ಲೀಟರ್ ಗಟ್ಟಲೆ ನೀರು ಪೋಲಾಗಿ, ವಾಹನ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದ ಘಟನೆ ಕನ್ಯಾನ ಪೇಟೆಯ ಕೆಳಗಿನಪೇಟೆಯಲ್ಲಿ ನಡೆದಿದೆ.

ಕನ್ಯಾನ ಪೇಟೆಯ ಕೆಳಗಿನಪೇಟೆಯ ಶಿರಂಕಲ್ಲು ಕ್ರಾಸ್ ಬಳಿಯಿಂದ ಹಾದುಹೋಗುತ್ತಿದ್ದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‍ಲೈನ್ ಆಕಸ್ಮಿಕವಾಗಿ ಒಡೆದು ನೀರು ಆಕಾಶದೆತ್ತರಕ್ಕೆ ಚಿಮ್ಮಿದೆ. ಇದರಿಂದ ಸುತ್ತಮುತ್ತಲಿನ ಅಂಗಡಿಯವರಿಗೆ, ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವಾಹನ ಚಾಲಕರಿಗೆ ತೊಂದರೆಯಾಗಿದೆ. ಕೆಲವರಂತೂ ನೀರು ಚಿಮ್ಮುತ್ತಿದ್ದ ವೇಳೆ ತಮ್ಮ ವಾಹನವನ್ನು ತೊಳೆದು ಲಾಭ ಪಡೆದುಕೊಂಡರೆ, ಇನ್ನೂ ಕೆಲವು ವಾಹನಗಳ ಒಳಗಡೆ ಚಿಮ್ಮಿದ ನೀರಿನಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.

ಸಂಪೂರ್ಣವಾಗಿ ನೀರಿನ ಸಮಸ್ಯೆ ನೀಗಿಸಲು ವಿಟ್ಲಪಡ್ನೂರು, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ ಗ್ರಾಮಗಳಲ್ಲಿ 26 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಉತ್ತಮ ದರ್ಜೆಯ ಪೈಪ್‍ಗಳನ್ನು ಅಳವಡಿಸಲಾಗಿದೆ. ಆದರೆ, ಅನೇಕ ಕಡೆಗಳಲ್ಲಿ ಅವುಗಳನ್ನು ಜೋಡಿಸಿದ ರೀತಿ ವೈಜ್ಞಾನಿಕವಾಗಿಲ್ಲ. ಇದರಿಂದ ಎಷ್ಟೋ ಕಡೆಗಳಲ್ಲಿ ನೀರು ಪೋಲಾಗುತ್ತಿದೆ. ಅದಲ್ಲದೆ, ಕನ್ಯಾನ ಗ್ರಾಮದ ಕಮ್ಮಜೆಯಲ್ಲಿ ನೀರು ಚರಂಡಿಯಲ್ಲಿ ಹರಿದು ಹೋಗುತ್ತಿದ್ದು, ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News