ಸಿಜೆಐ ವಿರುದ್ಧ ಷಡ್ಯಂತ್ರ ಕುರಿತು ವಕೀಲರ ಹೇಳಿಕೆಯ ಬೇರನ್ನು ತಲುಪುತ್ತೇವೆ: ಸುಪ್ರೀಂ ಕೋರ್ಟ್

Update: 2019-04-24 17:31 GMT

ಹೊಸದಿಲ್ಲಿ,ಎ.24: ಭಾರತ ಮುಖ್ಯ ನ್ಯಾಯಾಧೀಶ (ಸಿಜೆಐ) ರಂಜನ್ ಗೊಗೊಯಿ ಅವರನ್ನು ಲೈಂಗಿಕ ಕಿರುಕುಳ ಆರೋಪಗಳಲ್ಲಿ ಸಿಲುಕಿಸಲು ಭಾರೀ ಷಡ್ಯಂತ್ರವೊಂದು ನಡೆದಿತ್ತು ಎಂದು ವಕೀಲ ಉತ್ಸವ ಸಿಂಗ್ ಬೈನ್ಸ್ ಅವರ ಹೇಳಿಕೆಯ ಬೇರುಮಟ್ಟಕ್ಕೆ ನಾವು ತಲುಪುತ್ತೇವೆ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ತಿಳಿಸಿದೆ.

ಆರೋಪಿಸಲಾಗಿರುವಂತೆ ಸಂಚುಕೋರರು ತಮ್ಮ ಕಾರ್ಯವನ್ನು ಮುಂದುವರಿಸಿದರೆ ಮತ್ತು ನ್ಯಾಯಾಂಗದಲ್ಲಿ ಕೈವಾಡ ನಡೆಸುತ್ತಿದ್ದರೆ ಸಂಸ್ಥೆ ಅಥವಾ ನಾವ್ಯಾರೂ ಉಳಿಯುವುದಿಲ್ಲ. ಈ ಬಗ್ಗೆ ನಾವು ವಿಚಾರಣೆಯನ್ನು ನಡೆಸುತ್ತೇವೆ ಮತ್ತು ಇದಕ್ಕೆ ತಾರ್ಕಿಕ ಅಂತ್ಯವನ್ನು ಕಾಣಿಸುತ್ತೇವೆ ಎಂದು ನ್ಯಾ.ಅರುಣ್ ಮಿಶ್ರಾ ನೇತೃತ್ವದ ಪೀಠವು ಹೇಳಿತು.

ತನ್ನ ಆರೋಪವನ್ನು ಸಮರ್ಥಿಸುವ ಇನ್ನಷ್ಟು ಸಾಕ್ಷಗಳು ತನ್ನ ಬಳಿಯಿವೆ ಎಂದು ಬೈನ್ಸ್ ಬುಧವಾರ ಬೆಳಿಗ್ಗೆ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ,ಗುರುವಾರ ಬೆಳಿಗ್ಗೆ ಇನ್ನೊಂದು ಅಫಿದಾವತ್ತನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಗಳಾದ ಆರ್.ಎಫ್.ನಾರಿಮನ್ ಮತ್ತು ದೀಪಕ ಗುಪ್ತಾ ಅವರನ್ನೂ ಒಳಗೊಂಡ ಪೀಠವು ಅವರಿಗೆ ಸೂಚಿಸಿತು.

ಗುರುವಾರ ಈ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಪೀಠವು ತಿಳಿಸಿತು. ಷಡ್ಯಂತ್ರ ನಡೆದಿತ್ತೆಂಬ ಬೈನ್ಸ್ ಅವರ ಹೇಳಿಕೆಯ ವಿಚಾರಣೆಗೂ ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಕುರಿತು ಆದೇಶಿಸಲಾಗಿರುವ ಆಂತರಿಕ ವಿಚಾರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News