ಟ್ವಿಟರ್ ನಲ್ಲಿ ಫಾಲೋವರ್‌ಗಳ ಸಂಖ್ಯೆ ಕಡಿತ: ಟ್ರಂಪ್ ಮಾಡಿದದ್ದೇನು ಗೊತ್ತಾ?

Update: 2019-04-24 18:23 GMT

ವಾಶಿಂಗ್ಟನ್, ಎ. 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಸಾಮಾಜಿಕ ಮಾಧ್ಯಮ ‘ಟ್ವಿಟರ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾಕ್ ಡೋರ್ಸಿಯನ್ನು ಭೇಟಿಯಾಗಿ, ತನ್ನ ಟ್ವಿಟರ್ ಫಾಲೋವರ್‌ಗಳ ಸಂಖ್ಯೆಯಲ್ಲಿ ಯಾಕೆ ಕಡಿಮೆಯಾಗಿದೆ ಎಂಬುದಾಗಿ ಅವರನ್ನು ತುಂಬಾ ಸಮಯ ಪ್ರಶ್ನಿಸಿದರು ಎಂದು ಮೂಲವೊಂದು ತಿಳಿಸಿದೆ.

ಕನ್ಸರ್ವೇಟಿವ್ (ಸಂಪ್ರದಾಯವಾದಿ)ಗಳ ವಿರುದ್ಧ ಟ್ವಿಟರ್ ತಾರತಮ್ಯ ಧೋರಣೆ ಹೊಂದಿದೆ ಎಂಬುದಾಗಿ ಹೊಸದಾಗಿ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಟ್ವಿಟರ್ ಮುಖ್ಯಸ್ಥರನ್ನು ಭೇಟಿಯಾದರು.

‘‘ಶ್ವೇತಭವನದಲ್ಲಿ ಇಂದು ಅಪರಾಹ್ನ ಟ್ವಿಟರ್‌ನ ಜಾಕ್‌ರನ್ನು ಭೇಟಿಯಾದೆ. ಅವರ ಮಾಧ್ಯಮದ ಬಗ್ಗೆ ಹಾಗೂ ಒಟ್ಟಾರೆ ಜಾಗತಿಕ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದೆವು. ಮುಕ್ತ ಮಾತುಕತೆಯನ್ನು ಮುಂದುವರಿಸುವುದನ್ನು ಎದುರು ನೋಡುತ್ತಿದ್ದೇನೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ ಹಾಗೂ ಓವಲ್ ಕಚೇರಿಯಲ್ಲಿ ಡೋರ್ಸಿ ಮತ್ತು ಇತರರೊಂದಿಗೆ ತಾನಿದ್ದ ಚಿತ್ರವನ್ನು ಹಾಕಿದ್ದಾರೆ.

ಇದಕ್ಕೂ ಮುನ್ನ, ಟ್ವಿಟರ್ ನನ್ನ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂಬುದಾಗಿ ಟ್ರಂಪ್ ಆರೋಪಿಸಿದ್ದರು. ‘‘ಟ್ವಿಟರ್ ನನ್ನನ್ನು ರಿಪಬ್ಲಿಕನ್ ಆಗಿ ಚೆನ್ನಾಗಿ ಕಾಣುತ್ತಿಲ್ಲ. ತುಂಬಾ ತಾರತಮ್ಯ ಮಾಡುತ್ತಿದೆ’’ ಎಂಬುದಾಗಿ ಅವರು ಟ್ವಿಟರ್‌ನಲ್ಲಿ ಬರೆದಿದ್ದರು.

ಫಾಲೋವರ್‌ಗಳ ಸಂಖ್ಯೆಯಲ್ಲಿ ಕಡಿತ: ಹತಾಶ ಟ್ರಂಪ್

ಟ್ವಿಟರ್‌ನಲ್ಲಿ ಫಾಲೋವರ್‌ಗಳನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ಟ್ರಂಪ್ ಹತಾಶರಾಗಿದ್ದಾರೆ ಎನ್ನಲಾಗಿದೆ.

‘‘ನನ್ನ ಖಾತೆಯಿಂದ ತುಂಬಾ ಮಂದಿಯನ್ನು ಟ್ವಿಟರ್ ತೆಗೆದು ಹಾಕಿದೆ ಹಾಗೂ ಅದಕ್ಕಿಂತಲೂ ಮುಖ್ಯವಾಗಿ ಅವರು ಮರು ಸೇರ್ಪಡೆಯಾಗುವುದನ್ನು ಅದು ತುಂಬಾ ಕಷ್ಟಕರಗೊಳಿಸಿದೆ ಎಂಬಂತೆ ಕಂಡುಬಂದಿದೆ. ಅವರು ಫಾಲೋವರ್‌ಗಳ ಸಂಖ್ಯೆಯನ್ನು ಒಂದು ಹಂತಕ್ಕೆ ಮಿತಿಗೊಳಿಸಿದ್ದಾರೆ’’ ಎಂಬುದಾಗಿ ಅಕ್ಟೋಬರ್‌ನಲ್ಲಿ ಟ್ರಂಪ್ ಬರೆದಿದ್ದರು.

ಲಕ್ಷಾಂತರ ಸಂಶಯಾಸ್ಪದ ಖಾತೆಗಳನ್ನು ತೆಗೆದುಹಾಕಲು ಇತ್ತೀಚಿನ ದಿನಗಳಲ್ಲಿ ಟ್ವಿಟರ್ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಟ್ರಂಪ್‌ರ ಫಾಲೋವರ್‌ಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎನ್ನಲಾಗಿದೆ.

2016ರ ಅಧ್ಯಕ್ಷೀಯ ಚುನಾವಣೆ ಮತ್ತು ಇತರ ಚುನಾವಣೆಗಳಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ನಡೆಸಿದ ಅಪಪ್ರಚಾರ ಅಭಿಯಾನಗಳಿಗಾಗಿ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳು ಬಳಸಲ್ಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News