ನ್ಯಾಯಾಂಗದ ಘನತೆಯನ್ನು ನ್ಯಾಯಮೂರ್ತಿಯೇ ಕಾಪಾಡದಿದ್ದರೆ?

Update: 2019-04-25 06:04 GMT

ದೇಶದ ಯಾವುದೇ ಸರಕಾರಿ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ, ರಾಜಕೀಯ ನಾಯಕರ ವಿರುದ್ಧ ಇಂದು ಆರೋಪಗಳನ್ನು ಮಾಡುವಂತಿಲ್ಲ. ಸೇನಾಧಿಕಾರಿಯ ವಿರುದ್ಧ ಆರೋಪ ಮಾಡಿದರೆ ಅದನ್ನು ‘ಸೇನೆಯ ವಿರುದ್ಧ ಮಾಡಿದ ಸಂಚು’ ಎಂದು ವ್ಯಾಖ್ಯಾನಿಸಲಾಗುತ್ತದೆ. ಮೋದಿಯ ವಿರುದ್ಧ ಮಾತನಾಡಿದರೆ ಅದು ದೇಶದ ವಿರುದ್ಧ ಮಾಡಿದ ಸಂಚು. ಅಂತೆಯೇ ಇದೀಗ ದೇಶದ ಮುಖ್ಯ ನ್ಯಾಯ ಮೂರ್ತಿಯ ವಿರುದ್ಧ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಮಾಡಿದ ಲೈಂಗಿಕ ದೌರ್ಜನ್ಯದ ಆರೋಪವನ್ನು ಸ್ವತಃ ಆರೋಪಿಯಾಗಿರುವ ಮುಖ್ಯನ್ಯಾಯ ಮೂರ್ತಿ ರಂಜನ್ ಗೊಗೊಯಿ ಅವರು ‘ಇದು ನ್ಯಾಯಾಂಗದ ಮೇಲಿನ ದಾಳಿ’ ಎಂದು ಆರೋಪಿಸಿ, ದೂರುದಾರರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಮಾಜಿ ಮಹಿಳಾ ಸಿಬ್ಬಂದಿ ಆರೋಪದ ವಿವರಗಳ ಕುರಿತಂತೆ ಸುಪ್ರೀಂಕೋರ್ಟ್‌ನ 22 ನ್ಯಾಯಾಧೀಶರಿಗೆ ಅಫಿದಾವಿತ್ ಸಲ್ಲಿಸಿದ್ದಾರೆ. ಅದರಲ್ಲಿರುವ ವಿವರಗಳು ತೀರಾ ಸುಳ್ಳಿನ ಕಂತೆಯೆಂದು ಕಸದಬುಟ್ಟಿಗೆ ಎಸೆಯುವಷ್ಟು ಸರಳವಾಗಿಲ್ಲ. ಜೊತೆಗೆ ಆಕೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಿಶೇಷ ಸಮಿತಿಯಿಂದ ತನಿಖೆ ನಡೆಯಬೇಕು ಎಂದೂ ಆಗ್ರಹಿಸಿದ್ದಾರೆ.

ವಿಪರ್ಯಾಸವೆಂದರೆ ಈ ಆರೋಪದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಶನಿವಾರ ಆತುರಾತುರವಾಗಿ ವಿಶೇಷ ವಿಚಾರಣೆಯನ್ನು ನಡೆಸಿತು ಮತ್ತು ಈ ವಿಚಾರಣೆಯ ನೇತೃತ್ವವನ್ನು ಸ್ವತಃ ನ್ಯಾಯಮೂರ್ತಿ ಗೊಗೊಯಿ ಅವರೇ ವಹಿಸಿದ್ದರು. ಈ ವಿಶೇಷ ವಿಚಾರಣೆ ಗೊಗೊಯಿಯನ್ನು ಸಮರ್ಥಿಸುವುದಕ್ಕಾಗಿ ನಡೆದಿತ್ತೇ ವಿನಃ ಮಹಿಳೆಯ ಆರೋಪದ ಸತ್ಯಾಸತ್ಯತೆ ಇಲ್ಲಿ ಮುಖ್ಯವಾಗಲೇ ಇಲ್ಲ. ಏಕಪಕ್ಷೀಯವಾಗಿ ಗೊಗೊಯಿ ಅವರನ್ನು ಸಂತ್ರಸ್ತನೆಂದಷ್ಟೇ ಬಿಂಬಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ ಆರೋಪಿಯೇ ಅದರ ನೇತೃತ್ವವನ್ನು ವಹಿಸಿದರೆ, ಅಲ್ಲಿ ನ್ಯಾಯಕ್ಕೆ ಸ್ಥಳವೆಲ್ಲಿದೆ? ಮುಖ್ಯ ನ್ಯಾಯಮೂರ್ತಿಯ ಮೇಲೆ ಮಾಡಿರುವ ಆರೋಪ ‘ನ್ಯಾಯಾಂಗದ ಮೇಲಿನ ದಾಳಿ’ ಎಂದು ಕರೆದು ಗೊಗೊಯಿ ಸಂತ್ರಸ್ತೆಯ ಬಾಯಿ ಮುಚ್ಚಿಸುವ ಜೊತೆಗೆ ಆಕೆಯನ್ನೇ ಆರೋಪಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಅಂದರೆ ಅವರು ತನ್ನೆಡೆಗೆ ತೂರಿ ಬಂದ ಬಾಣದಿಂದ ಪಾರಾಗಲು ಸಂವಿಧಾನ ಪುಸ್ತಕವನ್ನೇ ಗುರಾಣಿಯಾಗಿಸಲು ಹೊರಟಿದ್ದಾರೆ.

ಇಷ್ಟಕ್ಕೂ ಗೊಗೊಯಿ ಎಂದರೆ ಸುಪ್ರೀಂಕೋರ್ಟ್ ಅಲ್ಲ. ಅವರೂ ಅದರ ಒಂದು ಭಾಗ. ಜೊತೆಗೆ ಗೊಗೊಯಿ ಎಲ್ಲರಂತೆ ಸಾಮಾನ್ಯ ಮನುಷ್ಯನೂ ಕೂಡ. ಅವರು ನ್ಯಾಯಮೂರ್ತಿ ಹುದ್ದೆಯನ್ನು ವಹಿಸಿದಾಕ್ಷಣ, ಅರಿಷಡ್ವರ್ಗಗಳನ್ನು ಮೀರಿರುತ್ತಾರೆ ಎನ್ನುವಂತಿಲ್ಲ. ಶ್ರೀಸಾಮಾನ್ಯನ ಕಾಮನೆಗಳು ಅವರಲ್ಲಿಯೂ ಇರುವುದು ಸಹಜ. ಸಂತ್ರಸ್ತೆ ತನ್ನ ಮೇಲೆ ಸುಪ್ರೀಂಕೋರ್ಟ್ ಲೈಂಗಿಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿಲ್ಲ. ಅವರ ಆರೋಪ, ನ್ಯಾಯಮೂರ್ತಿಯ ಆಚೆಗಿರುವ ಗೊಗೊಯಿಯ ವಿರುದ್ಧವಾಗಿದೆ. ಆದುದರಿಂದ ವೈಯಕ್ತಿಕವಾಗಿ ಮಹಿಳೆಯೊಬ್ಬಳು ಮಾಡಿದ ಆರೋಪವನ್ನು ಇಡೀ ಸುಪ್ರೀಂಕೋರ್ಟ್‌ನ ತಲೆಗೆ ಹಾಕಿ ಬಚಾವಾಗಲು ನೋಡುವುದು ರಂಜನ್ ಗೊಗೊಯಿ ಅವರ ಅತಿ ಜಾಣತನದಂತೆ ಕಾಣುತ್ತದೆ. ಮಹಿಳೆ ಮಾಡಿರುವ ಆರೋಪಕ್ಕೆ ಗೊಗೊಯಿ ಅವರಷ್ಟೇ ಹೊಣೆ. ತನ್ನ ಅಧಿಕಾರವನ್ನು ಬಳಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದಾದರೆ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿರುವುದು ಆರೋಪ ಮಾಡಿರುವ ಮಹಿಳೆಯಲ್ಲ, ಬದಲಿಗೆ ಆ ಸ್ಥಾನದ ನೇತೃತ್ವವಹಿಸಿಕೊಂಡಿರುವ ಗೊಗೊಯಿ ಅವರೇ ಆಗಿದ್ದಾರೆ. ತನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಮತ್ತೆ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಕೂಡ ನ್ಯಾಯಾಲಯಕ್ಕೆ ಎಸಗುವ ಅಪಚಾರವೇ ಆಗಿದೆ.

ತನ್ನ ಮೇಲೆಯೇ ಆರೋಪ ಮಾಡಿರುವಾಗ, ವಿಚಾರಣೆಯಿಂದ ತಾನು ದೂರ ನಿಲ್ಲಬೇಕು ಎನ್ನುವಂತಹ ಸಾಮಾನ್ಯ ಜ್ಞಾನ ಗೊಗೊಯಿ ಅವರಿಗೆ ಇಲ್ಲ ಎನ್ನುವುದನ್ನು ನಂಬಲು ಅಸಾಧ್ಯ. ಆರೋಪದ ಬಳಿಕ ಗೊಗೊಯಿ ಅವರ ಆತುರದ ನಡೆಯೇ ಅವರ ವಿಶ್ವಾಸಾರ್ಹತೆಗೆ ಧಕ್ಕೆಯನ್ನು ತಂದಿದೆ. ಈ ಹಿಂದೆ ನ್ಯಾಯ ಮೂರ್ತಿಯೊಬ್ಬರ ವಿರುದ್ಧ ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ಇತಿಹಾಸ ನಿರ್ಮಿಸಿದ ನಾಲ್ವರಲ್ಲಿ ಗೊಗೊಯಿ ಕೂಡ ಒಬ್ಬರು. ನ್ಯಾಯ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ ಎಂದಾಗ ಅವರು ಇತರರ ಜೊತೆಗೆ ಬೀದಿಗೆ ಬಂದು, ಸತ್ಯವನ್ನು ಸಾರ್ವಜನಿಕರಿಗೆ ತಲುಪಿಸಿದವರು. ಇದೀಗ ತನ್ನ ವಿರುದ್ಧವೇ ಭಾರೀ ಆರೋಪವೊಂದು ಕೇಳಿ ಬಂದಾಗ, ವಿಚಾರಣೆಗೆ ಅನುಕೂಲ ಮಾಡಿಕೊಡುವುದು, ಸತ್ಯಾಸತ್ಯತೆ ಬಹಿರಂಗವಾಗಲು ತನಿಖೆಗೆ ಅನುವು ಮಾಡುವುದು ಗೊಗೊಯಿ ಕರ್ತವ್ಯ. ಈ ನಿಟ್ಟಿನಲ್ಲಿ ಮಹಿಳಾ ಉದ್ಯೋಗಿಯ ಬೇಡಿಕೆಗೆ ಸುಪ್ರೀಂಕೋರ್ಟ್ ಸಮ್ಮತಿಸಬೇಕು. ಆರೋಪದ ಕಳಂಕವನ್ನು ಹೊತ್ತುಕೊಂಡು ಗೊಗೊಯಿ ನೀಡುವ ಯಾವುದೇ ತೀರ್ಪುಗಳು ಸುಪ್ರೀಂಕೋರ್ಟ್‌ನ ಘನತೆಗೆ ಘಾಸಿ ಮಾಡುತ್ತದೆ. ಆದುದರಿಂದ ಈ ಕಳಂಕದಿಂದ ಪಾರಾಗುವುದು ಸ್ವತಃ ಗೊಗೊಯಿ ಅವರ ಅಗತ್ಯವೂ ಆಗಿದೆ. ಪಾರದರ್ಶಕ ತನಿಖೆ ನಡೆದು ಈ ಆರೋಪದಿಂದ ಮುಕ್ತರಾದ ಬಳಿಕವೇ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿಯಬೇಕಾಗಿದೆ.

ವಿವಿಧ ಕಚೇರಿಗಳಲ್ಲಿ ಉನ್ನತ ಸ್ಥಾನವನ್ನು ವಹಿಸಿದ ಜನರು ಮಹಿಳೆಯರನ್ನು ಹೇಗೆ ಶೋಷಿಸುತ್ತಾ ಬಂದಿದ್ದಾರೆ ಎನ್ನುವುದು ‘ಮೀ ಟೂ’ ಚಳವಳಿಯಲ್ಲಿ ಬಹಿರಂಗವಾಗಿತ್ತು. ಈ ಆರೋಪಕ್ಕೆ ಸಂಬಂಧಿಸಿ ಓರ್ವ ಕೇಂದ್ರ ಸಚಿವರೇ ರಾಜೀನಾಮೆ ನೀಡಬೇಕಾಯಿತು. ಹಲವು ನ್ಯಾಯಾಲಯಗಳಲ್ಲಿ ‘ಮೀಟೂ’ ಪ್ರಕರಣಗಳು ವಿಚಾರಣೆ ನಡೆಯುತ್ತಿವೆ. ಇದೀಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಅದೂ, ಯಾವುದೋ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಆರೋಪ ಇದಲ್ಲ. 22 ನ್ಯಾಯಾಧೀಶರಿಗೆ ಸವಿವರವಾಗಿ ಅಫಿದಾವಿತ್ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅವರೇ ತನ್ನ ಮೇಲಿನ ಪ್ರಕರಣದ ವಿಚಾರಣೆಗೆ ಸಹಕರಿಸಲು ಸಿದ್ಧರಿಲ್ಲದೇ ಇದ್ದಾಗ, ಇತರ ಶ್ರೀಸಾಮಾನ್ಯರ ಪಾಡೇನು? ಒಂದು ವೇಳೆ ವಿಚಾರಣೆಗೆ ಸಹಕರಿಸದೇ ಇದ್ದಲ್ಲಿ, ಗೊಗೊಯಿ ಅವರು ನ್ಯಾಯವ್ಯವಸ್ಥೆಗೆ ಭಾರೀ ಧಕ್ಕೆಯನ್ನು ತರುತ್ತಾರೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಧಾನಿಯ ಹಸ್ತಕ್ಷೇಪ ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೊಳಗಾಗಿವೆ. ಇದೀಗ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯವರೇ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡರೆ, ನ್ಯಾಯವ್ಯವಸ್ಥೆಯ ಮೇಲಿರುವ ಅಳಿದುಳಿದ ಭರವಸೆಯೂ ಅಳಿದು ಹೋಗಬಹುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News