ಪಾರಮ್ಯ ಮೆರೆಯಲು ಭಾರತೀಯರು ಸಜ್ಜು

Update: 2019-04-24 18:32 GMT

ಬ್ಯಾಂಕಾಕ್, ಎ.24: ಭಾರತ ಪುರುಷರ ಬಾಕ್ಸಿಂಗ್ ತಂಡ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಪದಕದ ದಾಖಲೆಯನ್ನು ಈಗಾಗಲೇ ಸರಿಗಟ್ಟಿದ್ದು, ಮಹಿಳೆಯರು ತಮ್ಮ ಪಾರಮ್ಯವನ್ನು ಮುಂದುವರಿಸಿದ್ದಾರೆ. ಗುರುವಾರದಿಂದ ಆರಂಭವಾಗಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಇದೇ ರೀತಿಯ ಪ್ರದರ್ಶನ ಮುಂದುವರಿಸಲು ಭಾರತೀಯ ಸ್ಪರ್ಧಿಗಳು ಸಜ್ಜಾಗಿದ್ದಾರೆ.

7 ಮಂದಿ ಪುರುಷ ಹಾಗೂ 6 ಜನ ಮಹಿಳಾ ಬಾಕ್ಸರ್‌ಗಳು ಸೇರಿದಂತೆ ಒಟ್ಟು 13 ಭಾರತೀಯರು ನಾಲ್ಕರ ಘಟ್ಟಕ್ಕೆ ತಲುಪುವ ಮೂಲಕ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ. ಈ ಪ್ರದರ್ಶನ ಭಾರತೀಯರನ್ನು ಅಗ್ರಸ್ಥಾನದಲ್ಲಿರಿಸಿದೆ. ಏಶ್ಯದ ಶಕ್ತಿ ಕೇಂದ್ರಗಳಾದ ಕಝಕಿಸ್ತಾನ (7 ಮಂದಿ ಪುರುಷ ಹಾಗೂ ನಾಲ್ಕು ಮಹಿಳೆಯರು ಸೆಮಿಗೆ) ಹಾಗೂ ಚೀನಾ (ಇಬ್ಬರು ಪುರುಷ ಹಾಗೂ 8 ಮಹಿಳೆಯರು) ಭಾರತದ ನಂತರದ ಸ್ಥಾನ ಪಡೆದಿವೆ. ಪದಕದ ಸುತ್ತಿನಲ್ಲಿರುವ ಭಾರತೀಯ ಪುರುಷ ಬಾಕ್ಸರ್‌ಗಳೆಂದರೆ ದೀಪಕ್‌ಸಿಂಗ್ (49 ಕೆಜಿ), ಅಮಿತ್ ಪಂಘಲ್ (52 ಕೆಜಿ), ಕವಿಂದರ್ ಸಿಂಗ್ ಬಿಷ್ಟ್ (56 ಕೆಜಿ), ಶಿವ ಥಾಪ (60 ಕೆಜಿ), ಆಶಿಶ್ (69 ಕೆಜಿ), ಆಶಿಶ್ ಕುಮಾರ್ (75 ಕೆಜಿ) ಹಾಗೂ ಸತೀಶ್ ಕುಮಾರ್ (+91 ಕೆಜಿ). ಮಹಿಳೆಯರ ವಿಭಾಗದಲ್ಲಿರುವ ಭಾರತೀಯರು ನಿಖತ್ ಝರೀನಾ (51 ಕೆಜಿ), ಮನೀಷಾ (54 ಕೆಜಿ), ಸೋನಿಯಾ ಚಹಾಲ್ (57 ಕೆಜಿ), ಎಲ್ ಸರಿತಾ ದೇವಿ (60 ಕೆಜಿ), ಸಿಮ್ರನ್‌ಜಿತ್ ಕೌರ್ (64 ಕೆಜಿ) ಹಾಗೂ ಪೂಜಾ ರಾಣಿ (75 ಕೆಜಿ) ಆಗಿದ್ದಾರೆ. 2009ರಲ್ಲಿ ಭಾರತದ ಪುರುಷರ ತಂಡ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಿತ್ತು. ಒಂದು ಬಂಗಾರ ಸೇರಿದಂತೆ ಒಟ್ಟು ಏಳು ಪದಕಗಳನ್ನು ಬಾಚಿಕೊಂಡಿತ್ತು. 2005ರಲ್ಲಿ ತೈವಾನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳೆಯರು ಅತ್ಯುತ್ತಮ ಪ್ರದರ್ಶನದಿಂದ ಗಮನಸೆಳೆದಿದ್ದರು. ಈ ಟೂರ್ನಿಯಲ್ಲಿ ಭಾರತ ಒಟ್ಟಾರೆ 7 ಚಿನ್ನ ಸೇರಿದಂತೆ 11 ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News