×
Ad

ಪಂಜಾಬ್ ಸವಾಲು ಮೀರಿದ ರಾಯಲ್ ಚಾಲೆಂಜರ್ಸ್

Update: 2019-04-25 00:05 IST

ಬೆಂಗಳೂರು, ಎ.24: ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಬುಧವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 42ನೇ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ 17 ರನ್‌ಗಳ ಗೆಲುವು ಕಂಡಿದೆ.

203 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿತು.

ಪ್ರವಾಸಿ ತಂಡದ ಪರ ಇನಿಂಗ್ಸ್ ಆರಂಭಿಸಿದ ಲೋಕೇಶ್ ರಾಹುಲ್ (42, 27 ಎಸೆತ, 7 ಬೌಂಡರಿ, 1 ಸಿಕ್ಸರ್ ) ಹಾಗೂ ವಿಂಡೀಸ್ ದೈತ್ಯ ಕ್ರಿಸ್ ಗೇಲ್ (23, 10 ಎಸೆತ, 4 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 42 ರನ್ ಸೇರಿಸಿದರು. ಹೆಚ್ಚು ಅಬ್ಬರಿಸದ ಗೇಲ್ ವೇಗಿ ಉಮೇಶ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ರಾಹುಲ್ ಜೊತೆಗೂಡಿದ ಮಾಯಾಂಕ್ ಅಗರ್ವಾಲ್ (35, 21 ಎಸೆತ, 5 ಬೌಂಡರಿ, 1 ಸಿಕ್ಸರ್) ಆರ್‌ಸಿಬಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಸಿಡಿಯತೊಡಗಿದ್ದ ಅಗರ್ವಾಲ್ ಅವರು ಸ್ಟೋನಿಸ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ರಾಹುಲ್ ಕೂಡ ಹೆಚ್ಚು ಹೊತ್ತು ನಿಲ್ಲದೆ ಮೊಯಿನ್‌ಗೆ ಬಲಿಯಾದರು. ನಿಕೋಲಸ್ ಪೂರನ್ (46, 28 ಎಸೆತ, 1 ಬೌಂಡರಿ, 5 ಸಿಕ್ಸರ್ ) ಹಾಗೂ ಡೇವಿಡ್ ಮಿಲ್ಲರ್ (24, 25 ಎಸೆತ, 2 ಬೌಂಡರಿ) 4ನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಸೇರಿಸಿದರು. ರವಿಚಂದ್ರನ್ ಅಶ್ವಿನ್ (6) ವಿಫಲರಾದರು.

ಆರ್‌ಸಿಬಿ ಪರ ಉಮೇಶ್ ಯಾದವ್ 3 ಹಾಗೂ ನವದೀಪ್ ಸೈನಿ 2 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು.

ಬೆಂಗಳೂರು ಪರ ಪಾರ್ಥಿವ್ ಪಟೇಲ್ (43, 24 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ವಿರಾಟ್ ಕೊಹ್ಲಿ (13, 8 ಎಸೆತ, 2 ಬೌಂಡರಿ ) ಮೊದಲ ವಿಕೆಟ್ ಜೊತೆಯಾಟದಲ್ಲಿ 35 ರನ್ ಸೇರಿಸಿದರು. ಈ ವೇಳೆ ಮುಹಮ್ಮದ್ ಶಮಿ ಎಸೆತದಲ್ಲಿ ಕೊಹ್ಲಿ, ಮಂದೀಪ್ ಸಿಂಗ್‌ಗೆ ಕ್ಯಾಚ್ ನೀಡಿದರು. ಬಿರುಸಿನ ಆಟಕ್ಕಿಳಿದಿದ್ದ ಪಾರ್ಥಿವ್‌ರನ್ನು ಸ್ಪಿನ್ನರ್ ಮುರುಗನ್ ಅಶ್ವಿನ್ ಬಲೆಗೆ ಕೆಡವಿದರು. ಆ ಬಳಿಕ ಎಬಿ ಡಿವಿಲಿಯರ್ಸ್ (ಅಜೇಯ 82, 44 ಎಸೆತ, 3 ಬೌಂಡರಿ, 7 ಸಿಕ್ಸರ್) ಹಾಗೂ ಮೊಯಿನ್ ಅಲಿ (4, 5 ಎಸೆತ, 1 ಬೌಂಡರಿ) ಜೊತೆಯಾಟ ಹೆಚ್ಚು ಹೊತ್ತು ನಡೆಯಲಿಲ್ಲ. ಮೊಯಿನ್‌ರನ್ನು ನಾಯಕ ಆರ್. ಅಶ್ವಿನ್ ಪೆವಿಲಿಯನ್ ದಾರಿ ಹಿಡಿಸಿದರು.

ಅಕ್ಷದೀಪ್ ನಾಥ್ (3, 7 ಎಸೆತ) ಮತ್ತೊಮ್ಮೆ ವಿಫಲರಾದರು. ಡಿವಿಲಿಯರ್ಸ್‌ಗೆ ಮಾರ್ಕಸ್ ಸ್ಟೋನಿಸ್ (ಅಜೇಯ 46, 34 ಎಸೆತ, 2 ಬೌಂಡರಿ, 3 ಸಿಕ್ಸರ್) ಉತ್ತಮ ಸಾಥ್ ನೀಡಿದರು.

ಕೊನೆಯ ಮೂರು ಓವರ್‌ಗಳಲ್ಲಿ ಅಕ್ಷರಶಃ ಅಬ್ಬರಿಸಿದ ಡಿವಿಲಿಯರ್ಸ್ ಹಾಗೂ ಸ್ಟೋನಿಸ್ 64 ರನ್ ಬಾರಿಸಿದರು.

ಅಂಕಿತ್ ರಾಜ್‌ಪೂತ್, ಶಮಿ, ಆರ್.ಅಶ್ವಿನ್ ಹಾಗೂ ಎಂ.ಅಶ್ವಿನ್ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News