ಸೆಲಿಯಾಕ್ ಬಗ್ಗೆ ನಿಮಗೆಷ್ಟು ಗೊತ್ತು?

Update: 2019-04-24 19:19 GMT

ಗೋಧಿ, ಬಾರ್ಲಿ ಇತ್ಯಾದಿಗಳಲ್ಲಿರುವ ಗ್ಲುಟೆನ್ ಎಂಬ ಅಂಟುಪದಾರ್ಥವು ಶರೀರದ ತೂಕವನ್ನು ಹೆಚ್ಚಿಸುವ ಪೋಷಕಾಂಶವಾಗಿದೆ. ಹೀಗಾಗಿ ಶರೀರದ ತೂಕದ ಬಗ್ಗೆ ಕಾಳಜಿ ಇರುವ ಕೆಲವರು ಗ್ಲುಟೆನ್ ಇರುವ ಆಹಾರಗಳಿಂದ ದೂರವಿದ್ದರೆ, ಗ್ಲುಟೆನ್ ಅಸಹಿಷ್ಣುತೆ ಹೊಂದಿರುವ ಕೆಲವರಿಗೆ ಅದನ್ನು ದೂರವಿಡುವುದು ಅನಿವಾರ್ಯವಾಗಿದೆ. ಇಂತಹವರಲ್ಲಿ ಗ್ಲುಟೆನ್ ಕೆಲವು ಜೀರ್ಣ ಸಮಸ್ಯೆಗಳನ್ನುಂಟು ಮಾಡುತ್ತದೆ ಮತ್ತು ಗಂಭೀರ ಪ್ರಕರಣಗಳಲ್ಲಿ ಕೆಲವು ವಿಧಗಳ ಕ್ಯಾನ್ಸರ್‌ಗಳಿಗೂ ಕಾರಣವಾಗಬಹುದು. ಉದರಕ್ಕೆ ಸಂಬಂಧಿಸಿದ ಸೆಲಿಯಾಕ್ ಕಾಯಿಲೆಗೆ ಗ್ಲುಟೆನ್ ಅಸಹಿಷ್ಣುತೆ ಮೂಲ ಕಾರಣವಾಗಿದೆ. ಭಾರತದಲ್ಲಿ ಅಂದಾಜು 60ರಿಂದ 80 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಏನಿದು ಸೆಲಿಯಾಕ್ ಕಾಯಿಲೆ?

ಸೆಲಿಯಾಕ್ ಕಾಯಿಲೆಯು ಒಂದು ಸ್ವರಕ್ಷಿತ ರೋಗ(ನಮ್ಮ ರೋಗನಿರೋಧಕ ಶಕ್ತಿಯು ನಮ್ಮದೇ ಶರೀರದ ಜೀವಕೋಶಗಳ ಮೇಲೆ ದಾಳಿ ಮಾಡುವ ಪ್ರಕ್ರಿಯೆ)ವಾಗಿದ್ದು, ನಮ್ಮ ಶರೀರವು ಗ್ಲುಟೆನ್‌ಗೆ ಅಸಹಿಷ್ಣುತೆಯನ್ನು ಪ್ರದರ್ಶಿಸುತ್ತದೆ. ಗ್ಲುಟೆನ್ ಗೋಧಿ, ಬಾರ್ಲಿ ಇತ್ಯಾದಿಗಳಲ್ಲಿರುವ ಪ್ರೋಟಿನ್ ಆಗಿದೆ. ಗ್ಲುಟೆನ್ ಅಸಹಿಷ್ಣುತೆ ಹೊಂದಿರುವವರು ಅದನ್ನು ಸೇವಿಸಿದಾಗ ಶರೀರವು ತನ್ನದೇ ಜೀವಕೋಶಗಳ ಮೇಲೆ ದಾಳಿ ನಡೆಸುತ್ತದೆ ಮತ್ತು ಸಣ್ಣ ಕರುಳಿಗೆ ಹಾನಿಯನ್ನುಂಟು ಮಾಡುತ್ತದೆ. ಸಣ್ಣ ಕರುಳು ಶರೀರದ ಬಳಕೆಗಾಗಿ ಆಹಾರದಲ್ಲಿಯ ಪೋಷಕಾಂಶಗಳನ್ನು ರಕ್ತವು ಹೀರಿಕೊಳ್ಳುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಈ ರೋಗದ ಲಕ್ಷಣಗಳೇನು?

ಸೆಲಿಯಾಕ್ ರೋಗದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ತೂಕ ಇಳಿಕೆ, ಬಳಲಿಕೆ, ಹೊಟ್ಟೆನೋವು, ಅತಿಸಾರ, ವಾಕರಿಕೆ, ಮಲಬದ್ಧತೆ, ವಾಂತಿ, ಹೊಟ್ಟೆಯುಬ್ಬರ ಮತ್ತು ವಾಯುಪ್ರಕೋಪ ಇವು ಈ ರೋಗದ ಸಾಮಾನ್ಯ ಲಕ್ಷಣಗಳಲ್ಲಿ ಸೇರಿವೆ. ಕಬ್ಬಿಣದ ಕೊರತೆ ಅಥವಾ ರಕ್ತಹೀನತೆ, ಕೀಲುಗಳಲ್ಲಿ ನೋವು, ಅನಿಯಮಿತ ಋತುಚಕ್ರ, ಬಾಯಿಹುಣ್ಣು, ತಲೆನೋವು ಮತ್ತು ದಣಿವು, ಎದೆಯುರಿ ಹಾಗೂ ಡರ್ಮಟಿಟಿಸ್ ಹೆರ್ಪೆಟಿಫಾರ್ಮಿಸ್ ಎಂಬ ಚರ್ಮವ್ಯಾಧಿ ಇವು ಜೀರ್ಣ ವ್ಯವಸ್ಥೆಗೆ ಸಂಬಂಧಿಸದ ಲಕ್ಷಣಗಳಲ್ಲಿ ಸೇರಿವೆ.

ಅಪಾಯದ ಅಂಶಗಳೇನು?

ಸೆಲಿಯಾಕ್ ರೋಗದ ಆನುವಂಶಿಕ ಇತಿಹಾಸ, ಥೈರಾಯ್ಡ, ರುಮಟಾಯ್ಡ ಸಂಧಿವಾತ, ಮಧುಮೇಹ ಮತ್ತು ಡೌನ್ ಸಿಂಡ್ರೋಮ್ ಇವು ಈ ರೋಗಕ್ಕೆ ಕಾರಣವಾಗಬಲ್ಲ ಅಪಾಯದ ಅಂಶಗಳಲ್ಲಿ ಸೇರಿವೆ.

ರೋಗನಿರ್ಣಯ ಹೇಗೆ?

ವೈದ್ಯರು ರೋಗಿಯ ದೈಹಿಕ ತಪಾಸಣೆಯ ಜೊತೆಗೆ ಆತನ/ಆಕೆಯ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ. ಸಂಪೂರ್ಣ ಬ್ಲಡ್ ಕೌಂಟ್ ಸೇರಿದಂತೆ ಕೆಲವು ರಕ್ತಪರೀಕ್ಷೆಗಳು, ಯಕೃತ್ತಿನ ಕಾರ್ಯಕ್ಷಮತೆಯ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ ಹಾಗೂ ಕ್ಷಾರೀಯ-ಫಾಸ್ಫೇಟ್ ಮಟ್ಟದ ಪರೀಕ್ಷೆ ಸೇರಿದಂತೆ ಕೆಲವು ಹೆಚ್ಚುವರಿ ತಪಾಸಣೆಗಳನ್ನು ಅವರು ಕೈಗೊಳ್ಳಬಹುದು.

ಚಿಕಿತ್ಸೆ ಏನು?

ನಮ್ಮ ಆಹಾರದಿಂದ ಗ್ಲುಟೆನ್‌ನ್ನು ಸಂಪೂರ್ಣವಾಗಿ ವರ್ಜಿಸುವುದು ಈ ಸಮಸ್ಯೆಗೆ ಖಾಯಂ ಪರಿಹಾರವಾಗಿದೆ. ನಮ್ಮ ಆಹಾರಕ್ರಮವನ್ನು ರೂಪಿಸಿಕೊಳ್ಳಲು ವೈದ್ಯರ ಸಲಹೆ ಪಡೆಯಬಹುದು. ಇಂದಿನ ದಿನಗಳಲ್ಲಿ ಬಹುತೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಗೋಧಿಹಿಟ್ಟು ಮತ್ತು ಮೈದಾ ಬಳಕೆಯಾಗುವುದರಿಂದ ಗ್ಲುಟೆನ್‌ಮುಕ್ತ ಆಹಾರ ಕ್ರಮವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ, ಆದರೆ ಈ ಕಾಯಿಲೆಯಿಂದ ಪಾರಾಗಲು ಅದೊಂದೇ ಪರಿಹಾರವಾಗಿದೆ. ಬ್ರೆಡ್, ಓಟ್ಸ್, ಪಿಸ್ತಾ, ಕುಕೀಸ್, ಏಕದಳ ಧಾನ್ಯಗಳು, ಸಮುದ್ರ ಆಹಾರ ಇತ್ಯಾದಿಗಳಿಂದ ದೂರವಿರಬೇಕಾಗುತ್ತದೆ. ಡೇರಿ ಉತ್ಪನ್ನಗಳು, ಬಟಾಣಿ, ಬಟಾಟೆ, ಮೆಕ್ಕೆಜೋಳ, ಕಂದು ಅಕ್ಕಿ, ಬೀನ್ಸ್, ದ್ವಿದಳ ಧಾನ್ಯಗಳು ಮತ್ತು ತಾಜಾ ಹಣ್ಣುಗಳು ಗ್ಲುಟೆನ್ ಅಸಹಿಷ್ಣುತೆಯನ್ನು ಹೊಂದಿರುವವರಿಗೆ ಆರೋಗ್ಯಕರ ಆಹಾರಗಳಾಗಿವೆ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News