ಗುಜರಾತ್ ಸರ್ಕಾರದಿಂದ ಯಾವ ನೆರವೂ ದೊರಕಿಲ್ಲ: ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್

Update: 2019-04-25 05:59 GMT

ಹೊಸದಿಲ್ಲಿ, ಎ. 25: "ಗುಜರಾತ್ ಸರ್ಕಾರ ನನಗೆ ಯಾವ ನೆರವನ್ನೂ ನೀಡಿರಲಿಲ್ಲ; ಆದರೆ ನ್ಯಾಯಾಲಯ ನನ್ನ ನಿರೀಕ್ಷೆಯನ್ನು ಜೀವಂತ ಇರುವಂತೆ ಮಾಡಿದೆ" ಎಂದು 2002ರ ಗುಜರಾತ್ ಹತ್ಯಾಕಾಂಡ ಸಂದರ್ಭದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನು ಹೇಳಿದ್ದಾರೆ.

ಬಿಲ್ಕಿಸ್ ಅವರಿಗೆ 50 ಲಕ್ಷ ರೂ. ಪರಿಹಾರ, ಉದ್ಯೋಗ ಹಾಗೂ ಮನೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಈ ಸುದೀರ್ಘ ಹೋರಾಟವನ್ನು ಏಕಾಂಗಿಯಾಗಿ ನಡೆಸುವುದು ಹೇಗೆ ಸಾಧ್ಯವಾಯಿತು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿ ದಾಗ, "ನಿಮ್ಮ ಇಡೀ ಕುಟುಂಬವನ್ನು ಸರ್ವನಾಶ ಮಾಡಿದಾಗ, ನೀವು ಹೋರಾಡಲೇಬೇಕಾಗುತ್ತದೆ" ಎಂದು ಉತ್ತರಿಸಿದರು.

ಗುಜರಾತ್ ಗಲಭೆ ವೇಳೆ 2002ರಲ್ಲಿ ಬಿಲ್ಕಿಸ್ ಮನೆ ಮೇಲೆ ದಾಳಿ ಮಾಡಿದ ಗುಂಪೊಂದು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿತ್ತು. "ನನ್ನ ನರಳಿಕೆ ಮತ್ತು ಸುದೀರ್ಘ ಹೋರಾಟವನ್ನು ನ್ಯಾಯಾಂಗ ಗುರುತಿಸಿದೆ. ಇದು ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ" ಎಂದು ಅವರು ಪ್ರತಿಕ್ರಿಯಿಸಿದರು.

"ಸುಪ್ರೀಂಕೋರ್ಟ್ ಆದೇಶದಲ್ಲಿ ನನಗೆ ಪರಿಹಾರ ಧನ ನೀಡುವಂತೆ ಸೂಚಿಸಿರುವುದು ಮುಖ್ಯವಲ್ಲ; ಇದು ರಾಜ್ಯಕ್ಕೆ ಮತ್ತು ಇಡೀ ದೇಶದ ನಾಗರಿಕರಿಗೆ ನೀಡಿದ ಸ್ಪಷ್ಟ ಸಂದೇಶ. ನಮಗೂ ಹಕ್ಕುಗಳಿವೆ. ಅದನ್ನು ಸರ್ಕಾರ ಕೂಡಾ ಉಲ್ಲಂಘಿಸಲಾಗದು" ಎಂದು ಸ್ಪಷ್ಟಪಡಿಸಿದರು.

14 ಮಂದಿ ಕುಟುಂಬ ಸದಸ್ಯರೊಂದಿಗೆ ಮೂರು ವರ್ಷದ ಮಗುವನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟ ಅವರು, ಪರಿಹಾರ ಧನದ ಮೊತ್ತದಲ್ಲಿ ಒಂದು ಭಾಗವನ್ನು ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಮತ್ತು ನನ್ನಂತೆ ನ್ಯಾಯಕ್ಕಾಗಿ ಹೋರಾ ಡುವ ಮಹಿಳೆಯರಿಗೆ ನೆರವಾಗಲು ಮೀಸಲಿಡುವುದಾಗಿ ಘೋಷಿಸಿದರು.

2002ರ ಮಾರ್ಚ್ 3ರಂದು ನಡೆದ ಹಿಂಸಾಚಾರದಲ್ಲಿ ಮೂರು ವರ್ಷದ ತಮ್ಮ ಮೊದಲ ಮಗು ಸಲೇಹಾ ಬಲಿಯಾದ್ದು ಮಾತ್ರವಲ್ಲದೇ, ದಫನ ಮಾಡಲು ಬಾಲೆಯ ಮೃತದೇಹ ಕೂಡಾ ದೊರಕಲಿಲ್ಲ ಎಂಬ ಬೇಸರ ಬಿಲ್ಕಿಸ್ ಹಾಗೂ ಪತಿ ಯಾಕುಬ್ ಅವರಲ್ಲಿ ಇನ್ನೂ ಹಾಗೆಯೇ ಇದೆ.

"ಸಲೇಹಾಗೆ ಗೋರಿ ಕೂಡಾ ಇಲ್ಲ; ನಾನು ಎಲ್ಲಿ ಅಳಬೇಕು ?, ಆದರೆ ಆಕೆಯ ಚೈತನ್ಯ ನನ್ನಲ್ಲಿದೆ. ಎಲ್ಲೋ ಆಕೆ ಬೆಳೆಯುತ್ತಿದ್ದಾಳೆ ಎಂದಷ್ಟೇ ನಾನು ಹೇಳಬಲ್ಲೆ; ಇತರರಿಗೆ ನೆರವಾದಲ್ಲಿ, ಇತರ ಮಕ್ಕಳ ಜೀವದಲ್ಲಿ ಆಕೆ ಜೀವಂತ ಇರುತ್ತಾಳೆ" ಎಂದು ಅವರು ಬಿಕ್ಕಳಿಸಿ ಅತ್ತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News