ಲಂಕಾ ರಕ್ಷಣಾ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರ ರಾಜೀನಾಮೆಗೆ ಸೂಚನೆ

Update: 2019-04-25 03:44 GMT

ಕೊಲಂಬೊ, ಎ. 25: ಈಸ್ಟರ್ ಸಂಡೆ ದಿನದಂದು ನಡೆದ ಬಾಂಬ್‌ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 359ಕ್ಕೆ ಏರಿದ್ದು, ಘಟನೆಯನ್ನು ತಡೆಯುವಲ್ಲಿ ವಿಫಲರಾದ ಆರೋಪದಲ್ಲಿ ತಕ್ಷಣ ರಾಜೀನಾಮೆ ನೀಡುವಂತೆ ರಕ್ಷಣಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರಿಗೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೂಚನೆ ನೀಡಿದ್ದಾರೆ.

ಭಯೋತ್ಪಾದಕ ದಾಳಿ ಬಗೆಗಿನ ಗುಪ್ತಚರ ಮುನ್ನೆಚ್ಚರಿಕೆಯನ್ನು ಕಡೆಗಣಿಸಿದ ಆರೋಪದಲ್ಲಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫೆರ್ನಾಂಡೊ ಮತ್ತು ಪೊಲೀಸ್ ಮಹಾ ನಿರೀಕ್ಷಕ ಪೂಜಿತ್ ಜಯಸುಂದರ ಅವರ ರಾಜೀನಾಮೆಗೆ ಸೂಚಿಸಲಾಗಿದೆ.

ಮಂಗಳವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಭಾಷಣದಲ್ಲಿ ಸಿರಿಸೇನಾ, ಭದ್ರತಾ ಲೋಪವನ್ನು ಒಪ್ಪಿಕೊಂಡಿದ್ದರು ಹಾಗೂ ಪೊಲೀಸ್ ಮತ್ತು ಭದ್ರತಾ ಪಡೆಯ ಪುನರ್ರಚನೆ ಮಾಡುವುದಾಗಿ ಘೋಷಿಸಿದ್ದರು.

ಮೂರು ಚರ್ಚ್ ಹಾಗೂ ಮೂರು ಐಷಾರಾಮಿ ಹೋಟೆಲ್‌ಗಳ ಮೇಲೆ ಒಂಬತ್ತು ಮಂದಿ ಆತ್ಮಹತ್ಯಾ ದಾಳಿಕೋರರು ಬಾಂಬ್ ದಾಳಿ ನಡೆಸಿದ್ದರು. ಇವರೆಲ್ಲರೂ ಮಧ್ಯಮ ವರ್ಗಕ್ಕೆ ಸೇರಿದವರು ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ವಿವರಿಸಿದ್ದಾರೆ.

ಒಬ್ಬ ದಾಳಿಕೋರನ ಪತ್ನಿಯೂ ಈ ದಾಳಿಯಲ್ಲಿ ಪಾಲ್ಗೊಂಡಿದ್ದಳು. ಆ ಮಹಿಳೆ, ಓರ್ವ ಮಗು ಹಾಗೂ ಮೂವರು ಪೊಲೀಸರು ಬಾಂಬ್‌ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News