ಭರದಿಂದ ಸಾಗುತ್ತಿದೆ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ

Update: 2019-04-25 10:47 GMT

ಬಂಟ್ವಾಳ, ಎ.24: ಮಂಗಳೂರು, ಬಂಟ್ವಾಳ ಸಹಿತ ಮುಖ್ಯ ಪಟ್ಟಣಗಳು ಜಿಲ್ಲೆಯ ಜೀವನದಿ ನೇತ್ರಾವತಿಯನ್ನು ಅವಲಂಬಿಸಿದ್ದರೆ, ಬಂಟ್ವಾಳ ತಾಲೂಕಿನ ಸರಪಾಡಿ ಮತ್ತು ಇತರ ಗ್ರಾಮಗಳಿಗೆ ನೀರು ಪೂರೈಸಲು ಸರಪಾಡಿ ಬಹುಗ್ರಾಮ ಕುಡಿ ಯುವ ನೀರಿನ ಯೋಜನೆಯನ್ನು ಅವಲಂಬಿಸಿದ್ದು, ಇದರ ಕಾಮಗಾರಿಯೂ ಸರಪಾಡಿಯಲ್ಲಿ ಭರದಿಂದ ನಡೆಯುತ್ತಿದೆ. ಮಹತ್ವಾಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ ಸರಪಾಡಿಯಲ್ಲಿ ಅನುಷ್ಠಾನಗೊಂಡಿದ್ದು, 32.90 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಇದರಿಂದ ಈ ಭಾಗದ ಜನತೆಯ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿದೆ.

45 ಸಾವಿರ ಮನೆಗಳಿಗೆ ಶುದ್ಧನೀರು ಪೂರೈಕೆ: ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಪಂ ವ್ಯಾಪ್ತಿಯ ಪೆರ್ಲ-ಬೀಯಪಾದೆಯಲ್ಲಿ ಸರಪಾಡಿ ಮತ್ತು ಇತರ 97 ಜನವಸತಿ ಪ್ರದೇಶ ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿದೆ. ವರ್ಷ ದೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಹೊಂದಿದ್ದು, ಇದರಿಂದ ಈ ಭಾಗದ 45 ಸಾವಿರ ಮನೆಗಳಿಗೆ ಶುದ್ಧನೀರು ಪೂರೈಕೆಯಾಗಲಿದೆ. ಯೋಜನೆ ಅನುಷ್ಠಾನದಿಂದ ಕೊಳವೆ ಬಾವಿಯ ಬಳಕೆ ಕಡಿಮೆಯಾಗಲಿದ್ದು, ಅಂತರ್ಜಲವೂ ವೃದ್ಧಿಯಾಗುತ್ತದೆ. ಆದರೆ ಕುಡಿಯುವ ನೀರನ್ನು ಕೃಷಿಕಾರ್ಯ ಸಹಿತ ಇತರ ಕಾರ್ಯಗಳಿಗೆ ಬಳಸದೇ ಯೋಜನೆಯ ಯಶಸ್ವಿಗೆ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ ಎಂದು ಇಲಾಖಾ ಎಂಜಿನಿಯರ್‌ನ ಅಭಿಪ್ರಾಯ.

ಸರಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿಕರೇ ಹೆಚ್ಚಿ ದ್ದುಕೃಷಿ ಚಟುವಟಿಕೆಗಳಿಗೆ ಕೊಳವೆ ಬಾವಿಯನ್ನು ಅವಲಂಬಿಸಿದ್ದಾರೆ. ಕುಡಿಯುವ ನೀರಿಗೆ ಖಾಸಗಿ ಬಾವಿಗಳಿದ್ದರೂ ಹೆಚ್ಚಿನ ಗ್ರಾಮಸ್ಥರು ಸರಕಾರಿ ಸಾರ್ವಜನಿಕ ಕುಡಿಯುವ ನೀರನ್ನೇ ಅವಲಂಬಿಸಿದ್ದಾರೆ. ಬೇಸಿಗೆಯಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಕೊರತೆ ಯಾಗುವುದರಿಂದ ನೀರಿನ ಸಮಸ್ಯೆ ಉಂಟಾಗುತ್ತದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಈಗಾಗಲೇ ಸರಪಾಡಿ ಗ್ರಾಪಂ ವ್ಯಾಪ್ತಿಯ ಅಲ್ಲಿಪಾದೆ ಮೊದಲಾದೆಡೆ ಕೃಷಿ ಹಾಗೂ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಕೊಳವೆ ಬಾವಿ ಬತ್ತಿಹೋಗಿದೆ. ಸದ್ಯ ನೀರಿನ ಪರ್ಯಾಯ ವ್ಯವಸ್ಥೆಗೆ ಗ್ರಾಪಂ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂದಕ್ಕೆ ಯೋಜನೆಯಿಂದ ಶಾಶ್ವತ ಪರಿಹಾರ ದೊರಕಬಹುದಾಗಿದೆ.

ಯಾವ್ಯಾವ ಗ್ರಾಮಗಳು?

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಪಂ ವ್ಯಾಪ್ತಿಯ ಸರಪಾಡಿ, ದೇವಶ್ಯಮೂಡೂರು, ಉಳಿ, ಬಡಗಕಜೆಕಾರು, ತೆಂಕಕಜೆಕಾರು, ನಾವೂರು, ಮಣಿನಾಲ್ಕೂರು, ಪಿಲಾತಬೆಟ್ಟು, ಕಾವಳಮೂಡೂರು, ದೇವಸ್ಯಪಡೂರು, ಕಾವಳಪಡೂರು, ಕಾಡಬೆಟ್ಟು, ಇರ್ವತ್ತೂರು, ಮೂಡುಪಡುಕೋಡಿ ಹಾಗೂ ಇತರ 97 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದಾಗಿದೆ. ಮೂರು ಓವರ್ ಹೆಡ್ ಟ್ಯಾಂಕ್‌ಗಳ ಮೂಲಕ ಈ ಭಾಗದ 45 ಸಾವಿರ ಮನೆಗಳಿಗೆ ಶುದ್ಧನೀರು ಪೂರೈಕೆಯ ಗುರಿಯನ್ನು ಹೊಂದಿದೆ.

ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಲ ಸಂಪನ್ಮೂಲಕ್ಕೆ ಪೆರ್ಲ ಬೀಯಪಾದೆಯಲ್ಲಿ ನೇತ್ರಾವತಿ ನದಿ ಮಧ್ಯದಲ್ಲಿ ಜಾಕ್‌ವೆಲ್ ನಿರ್ಮಿಸಿ ನೀರೆತ್ತಲಾಗುವುದು. ಬಳಿಕ ತೆಕ್ಕಿಕಾಡುವಿನ ಶುದ್ಧೀಕರಣ ಘಟಕದಲ್ಲಿ ನೀರು ಶುದ್ಧಗೊಂಡು ಫಲಾನುಭವಿ ಗ್ರಾಮಗಳಿಗೆ ಪೂರೈಸಲಾಗುವುದು. ಎಂಆರ್‌ಪಿಎಲ್ ಅಣೆಕಟ್ಟು ಇರುವ ಕಾರಣ ನೀರಿನ ಸಮಸ್ಯೆಯಾಗದು. ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ.

 ಕೃಷ್ಣ ಮಾನಪ್ಪ, ಕಿರಿಯ ಇಂಜಿನಿಯರ್

Writer - ಅಬ್ದುಲ್ ರಹ್ಮಾನ್ ತಲಪಾಡಿ

contributor

Editor - ಅಬ್ದುಲ್ ರಹ್ಮಾನ್ ತಲಪಾಡಿ

contributor

Similar News