ಆಲೂಗಡ್ಡೆ ಬೆಳೆದದ್ದಕ್ಕಾಗಿ ರೈತರ ವಿರುದ್ಧ ಕೇಸು ದಾಖಲಿಸಿದ ಪೆಪ್ಸಿಕೋ ಕಂಪೆನಿ!

Update: 2019-04-25 08:45 GMT

ಅಹ್ಮದಾಬಾದ್, ಎ.25: ಅಮೆರಿಕನ್ ಕಂಪೆನಿ ಪೆಪ್ಸಿಕೋ ತಾನು ತನ್ನ ಲೇ'ಸ್ ಬ್ರ್ಯಾಂಡ್ ಚಿಪ್ಸ್ ಗಾಗಿ ವಿಶೇಷವಾಗಿ ನೋಂದಾಯಿಸಿಕೊಂಡಿರುವ ಒಂದು ವಿಧದ ಆಲೂಗಡ್ಡೆಯನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಒಂಬತ್ತು  ರೈತರ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ. ಪೆಪ್ಸಿಕೋ ಕಂಪೆನಿಯ ಈ ಕ್ರಮದ ವಿರುದ್ಧ ರೈತ ನಾಯಕರು ಹಾಗೂ ಹಲವಾರು ಸಾಮಾಜಿಕ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.

ಪೆಪ್ಸಿಕೋ ಕಂಪೆನಿಯಿಂದ ಕೋರ್ಟ್ ಪ್ರಕರಣ ಎದುರಿಸುತ್ತಿರುವ ಒಂಬತ್ತು ರೈತರು ಗುಜರಾತ್ ರಾಜ್ಯದ ಸಬರಕಂಥ ಮತ್ತು ಅರವಳ್ಳಿ ಜಿಲ್ಲೆಯವರಾಗಿದ್ದಾರೆ. ಇವರೆಲ್ಲರೂ ತಲಾ ಮೂರರಿಂದ ನಾಲ್ಕು ಎಕರೆ ಜಮೀನು ಹೊಂದಿದ್ದಾರೆ.

ರೈತರಾದ ಚಬಿಲ್‍ ಭಾಯಿ ಪಟೇಲ್, ವಿನೋದ್ ಪಟೇಲ್ ಹಾಗೂ  ಹರಿಭಾಯಿ ಪಟೇಲ್ ಅವರಿಗೆ ಕಳೆದ ವಾರ ಅಹ್ಮದಾಬಾದ್ ನ ನ್ಯಾಯಾಲಯವೊಂದು ತಾನು ವಿಚಾರಣೆ ನಡೆಸಲಿರುವ ಮುಂದಿನ ದಿನಾಂಕವಾದ ಎಪ್ರಿಲ್ 26ರ ತನಕ ಈ ನಿರ್ದಿಷ್ಟ ವಿಧದ ಆಲೂಗಡ್ಡೆ ಬೆಳೆಸುವುದನ್ನು ಹಾಗೂ ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿತ್ತು. ಕಂಪೆನಿಯ ಹಕ್ಕುಗಳ ಮೇಲೆ ಸವಾರಿ ಮಾಡಿದ್ದ ಆರೋಪದ ಕುರಿತಂತೆ ಮೂವರಿಂದಲೂ ನ್ಯಾಯಾಲಯ ಪ್ರತಿಕ್ರಿಯೆ ಕೇಳಿತ್ತು.

ಪೆಪ್ಸಿಕೋ ಮನವಿಯಂತೆ ನ್ಯಾಯಾಲಯವು ವಕೀಲ ಪಾರಸ್ ಸುಖ್ವಾನಿ ಅವರನ್ನು ಈ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ಕೋರ್ಟ್ ಕಮಿಷನರ್ ಆಗಿ ನೇಮಿಸಿದೆ.

ಪೆಪ್ಸಿಕೋ ರೈತರ ವಿರುದ್ಧ ನ್ಯಾಯಾಲಯಕ್ಕೆ ಹೋಗಿರುವುದನ್ನು ವಿರೋಧಿಸಿದ ದೇಶದ ವಿವಿಧೆಡೆಗಳ 190ಕ್ಕೂ ಹೆಚ್ಚು ಮಂದಿ ರೈತರು, ವಿಜ್ಞಾನಿಗಳು, ಹೋರಾಟಗಾರರು ಹಾಗೂ ವಿವಿಧ ಯೂನಿಯನ್ ಗಳು ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಿವೆ.

ತಾನು ತನ್ನ ಚಿಪ್ಸ್ ತಯಾರಿಸಲು ಬಳಸುವ ರಿಜಿಸ್ಟರ್ಡ್ ಮಾದರಿಯ ಎಫ್‍ಎಲ್ 2028 ಎಂಬ ಹೆಸರಿನ ಆಲೂಗಡ್ಡೆಯನ್ನು ಪ್ರೊಟೆಕ್ಷನ್ ಆಫ್ ಪ್ಲ್ಯಾಂಟ್ ವೆರೈಟೀಸ್ ಆ್ಯಂಡ್ ಫಾರ್ಮರ್ಸ್ ರೈಟ್ಸ್ ಆ್ಯಕ್ಟ್ 2001 ಇದರನ್ವಯ ಪೆಪ್ಸಿಕೋ ನೋಂದಣಿ ಮಾಡಿದೆ. ಈ ನಿರ್ದಿಷ್ಟ ಮಾದರಿಯ ಆಲೂಗಡ್ಡೆಯು ಎಫ್‍ಎಲ್ 1867 ಹಾಗೂ ವಿಸ್ಚಿಪ್ ಇವುಗಳ ಮಿಶ್ರ ತಳಿಯಾಗಿದೆ.

ಖರೀದಿ ಒಪ್ಪಂದದ ಪ್ರಕಾರ ಪಂಜಾಬ್ ರಾಜ್ಯದ ಕೆಲ ರೈತರಿಗೆ ಈ ನಿರ್ದಿಷ್ಟ ಮಾದರಿಯ ಆಲೂಗಡ್ಡೆ ಬೆಳೆಸಲು ಕಂಪೆನಿ ಪರವಾನಿಗೆ ನೀಡಿದೆ.

ಈ ವರ್ಷದ ಜನವರಿಯಿಂದ ಗುಜರಾತ್ ರಾಜ್ಯದ ಒಂಬತ್ತು ರೈತರು ಈ ಮಾದರಿಯ ಆಲೂಗಡ್ಡೆಯನ್ನು ಅನಧಿಕೃತವಾಗಿ ಬೆಳೆಸುತ್ತಿದ್ದಾರೆಂದು ತಿಳಿದ ಕಂಪೆನಿ ರಹಸ್ಯವಾಗಿ ಅವುಗಳ ವೀಡಿಯೋ ತೆಗೆದು ಮಾದರಿಗಳನ್ನು ಸಂಗ್ರಹಿಸಿ ನಂತರ ತನ್ನದೇ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಪ್ರತಿಯೊಬ್ಬ ರೈತನ ವಿರುದ್ಧದ ಪ್ರಕರಣದಲ್ಲಿ ತನಗೆ ರೂ 1 ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಹೇಳಿದೆ. ಹಾಗೂ  ನಾಲ್ಕು ಮಂದಿಯ ವಿರುದ್ಧ ಈ ತಿಂಗಳು ಕೋರ್ಟ್ ಪ್ರಕರಣ ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News