ಸಿಜೆಐಯನ್ನು ಸಿಲುಕಿಸಲು ಷಡ್ಯಂತ್ರ ಆರೋಪ: ಬೆಂಕಿಯೊಡನೆ ಆಟವಾಡಬೇಡಿ ಎಂದ ಸುಪ್ರೀಂ ಕೋರ್ಟ್

Update: 2019-04-25 08:52 GMT

ಹೊಸದಿಲ್ಲಿ, ಎ.25: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ದೊಡ್ಡ ಮಟ್ಟದ ಸಂಚು ನಡೆಯುತ್ತಿದೆ ಎಂದು ವಕೀಲರಾದ ಉತ್ಸವ್ ಬೈನ್ಸ್ ಆರೋಪದ ಕುರಿತಾದ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠವು ಮಂಗಳವಾರ ‘ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ತಿರುಚಲು ಹಣ ಬಲ ಅಥವಾ ರಾಜಕೀಯ ಬಲ ಪ್ರಯೋಗಿಸಲು ಯತ್ನಿಸುತ್ತಿರುವ ಜನರಿಗೆ’ ಎಚ್ಚರಿಕೆ ನೀಡಿದೆ.

“ಬೆಂಕಿಯೊಡನೆ ಆಟವಾಡಬೇಡಿ....  ಈ ನ್ಯಾಯಾಲಯವನ್ನು ನಿಯಂತ್ರಿಸಲು ಅಥವಾ  ನಡೆಸಲು ನಿಮಗೆ ಸಾಧ್ಯವಿಲ್ಲ ಎಂದು ಈ ದೇಶದ ಜನರಿಗೆ, ಶ್ರೀಮಂತರಿಗೆ ಹಾಗೂ ಪ್ರಭಾವಿಗಳಿಗೆ ನಾವು ಸಂದೇಶ ನೀಡಲು ಬಯಸುತ್ತೇವೆ'' ಎಂದು ತ್ರಿಸದಸ್ಯ ಪೀಠದ ಜಸ್ಟಿಸ್ ಅರುಣ್ ಮಿಶ್ರಾ ಹೇಳಿದರು.

ವಕೀಲರು ತಮ್ಮ ಆರೋಪಗಳನ್ನು ರಹಸ್ಯ ಅಫಿದಾವತ್ ನಲ್ಲಿ ಸಲ್ಲಿಸಿದ್ದು ಈ ಸಂದರ್ಭ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು “ನ್ಯಾಯಾಲಯವನ್ನು ತಮಗೆ ಬೇಕಾದಂತೆ ನಡೆಸಲು ವ್ಯವಸ್ಥಿತ ಸಂಚು ನಡೆಯುತ್ತಿದೆ” ಎಂದರು.

``ಈ ಸಂಸ್ಥೆಯ ಜತೆ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ವರ್ತಿಸುತ್ತಿರುವ ರೀತಿಯಿಂದ ನಮಗೆ ಆಕ್ರೋಶ ಮೂಡುತ್ತಿದೆ. ಈ ಸಂಸ್ಥೆ ಸಾಯುವುದು'' ಎಂದು ಗುರುವಾರ ಗಂಭೀರವಾಗಿ ಪ್ರತಿಕ್ರಿಯಿಸಿದೆ

ಈ ಸಂಚಿನ ಬುಡಕ್ಕೆ ತಾನು ಹೋಗುವುದಾಗಿ ಬುಧವಾರದ ವಿಚಾರಣೆ ವೇಳೆ ಜಸ್ಟಿಸ್ ಅರುಣ್ ಮಿಶ್ರಾ, ಜಸ್ಟಿಸ್ ರೋಹಿಂಟನ್ ಫಾಲಿ ನಾರಿಮನ್ ಹಾಗೂ ಜಸ್ಟಿಸ್ ದೀಪಕ್ ಗುಪ್ತಾ ಅವರ ಪೀಠ ಹೇಳಿತ್ತು.

ನ್ಯಾಯಾಲಯದಿಂದ ಉಚ್ಛಾಟನೆಗೊಂಡ ಕೆಲ ಉದ್ಯೋಗಿಗಳು ಸಿಜೆಐ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಒಗ್ಗೂಡಿದ್ದಾರೆ ಎಂದು ವಕೀಲ ಉತ್ಸವ್ ಅವರ ಅಫಿದಾವತ್ ಹೇಳಿದೆ.

ಇತ್ತೀಚಿಗಿನ ಪ್ರಕರಣದಲ್ಲಿ ಕೋರ್ಟ್ ಆದೇಶವನ್ನು ಬದಲಿಸಿದ್ದಕ್ಕಾಗಿ ಸಿಜೆಐ ಅವರಿಂದ ಉಚ್ಛಾಟನೆಗೊಂಡಿದ್ದ ಹಾಗೂ ಪೊಲೀಸ್ ಕೇಸ್ ಎದುರಿಸುತ್ತಿದ್ದ ಇಬ್ಬರು ಇದರಲ್ಲಿ ಸೇರಿದ್ದಾರೆಂದೂ ಅಫಿದಾವತ್ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿಯ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪ ಹಾಗೂ  ಅವರ ವಿರುದ್ಧದ ಸಂಚಿನ ಆರೋಪ ಎರಡೂ ಪ್ರತ್ಯೇಕ ಎಂದು ಜಸ್ಟಿಸ್ ಮಿಶ್ರಾ ಈಗಾಗಲೇ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಕುರಿತಂತೆ ವಿಚಾರಣೆ ನಡೆಸಲು ನೇಮಕಗೊಂಡಿರುವ ತ್ರಿಸದಸ್ಯ ಸಮಿತಿಯನ್ನು ಜಸ್ಟಿಸ್ ಎಸ್ ಎ ಬೊಬ್ಡೆ ವಹಿಸಿದ್ದು ಈ ಪೀಠ ಶುಕ್ರವಾರ ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News