ಸಿದ್ದರಾಮಯ್ಯ ಬೆಂಬಲಕ್ಕೆ ನಿಂತ ಬಿಜೆಪಿ ಮುಖಂಡ ಸಿ.ಟಿ. ರವಿ !

Update: 2019-04-25 10:37 GMT

ರಾಜಕೀಯದಲ್ಲಿ ಬದ್ಧ ಎದುರಾಳಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಮುಖಂಡ ಸಿ.ಟಿ. ರವಿ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಇದೆಯೇ ? ಗುರುವಾರ ಸಿ.ಟಿ. ರವಿ ಮಾಡಿರುವ ಟ್ವೀಟ್ ಒಂದು ಇಂತಹ ಪ್ರಶ್ನೆ ಹುಟ್ಟು ಹಾಕಿದೆ.

ಇಲ್ಲ, ಸಿಟಿ ರವಿ ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಬೆಂಬಲ ಘೋಷಿಸಿಲ್ಲ. ಸಿದ್ದು ಕುರಿತ ಹಳೆ ಟ್ವೀಟ್ ಒಂದನ್ನು ಎತ್ತಿಕೊಂಡಿರುವ ಬಿಜೆಪಿ ಮುಖಂಡ ಹಾಗು ರಾಜಕೀಯದಲ್ಲಿ ಸದಾ ಸಿದ್ದು ವಿರುದ್ಧ ಗುಡುಗುತ್ತಿರುವ ರವಿ ಅವರು ಈ ಟ್ವೀಟ್ ನಲ್ಲಿ ಉಲ್ಲೇಖಿಸಿದ ವರದಿಯಲ್ಲಿ ಸಿದ್ದರಾಮಯ್ಯ ಬಗ್ಗೆ ಕೀಳು ಅಭಿರುಚಿಯಿಂದ ಬರೆಯಲಾಗಿದೆ ಎಂದು ಹರಿಹಾಯ್ದಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯುವ ಹೊತ್ತಲ್ಲಿ ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಒಂದು ಲೇಖನ ಬರೆದಿದ್ದರು. ಪ್ರಧಾನಿ ಮೋದಿ ಹಾಗು ಅವರ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೇರದಂತೆ ಕುರಿ ಕಾಯುವವನೊಬ್ಬನ ಮಗ ತಡೆಯುವರೇ ? ಎಂಬ ಶೀರ್ಷಿಕೆಯ ಲೇಖನವದು.

ಸಿದ್ದರಾಮಯ್ಯನವರು ಕುರುಬ ಸಮುದಾಯಕ್ಕೆ ಸೇರಿದವರಾದ್ದರಿಂದ ಸಾಂಕೇತಿಕವಾಗಿ ಬರ್ಖಾ ಈ ಶೀರ್ಷಿಕೆ ಕೊಟ್ಟಿದ್ದರು. ತಮ್ಮ ಈ ಲೇಖನದ ಬಗ್ಗೆ ಬರ್ಖಾ ಟ್ವೀಟ್ ಕೂಡ  ಆಗಲೇ ( ಮೇ 10, 2018) ಮಾಡಿದ್ದರು.

ಆದರೆ ಅದೇನು ಕಾರಣವೋ , ಗುರುವಾರ ಇದ್ದಕ್ಕಿದ್ದಂತೆ ಸಿಟಿ ರವಿ ಅವರಿಗೆ ಸಿದ್ದರಾಮಯ್ಯ ಮೇಲೆ ಪ್ರೀತಿ ಉಕ್ಕಿ ಬಂದಿದೆ. "ಈ ಲೇಖನ ಅವರ ಘನತೆಗೆ ಕುಂದು ಉಂಟು ಮಾಡುವಂತಿದೆ. ಅವರು ತಳಮಟ್ಟದಿಂದ ಬೆಳೆದು ಬಂದು ಅವರ ಸ್ವಂತ ಸಾಮರ್ಥ್ಯದಿಂದ ಜನ ನಾಯಕನಾದವರು. ಇದು ಅವಹೇಳನಕಾರಿ ಪತ್ರಿಕೋದ್ಯಮ. ಕನ್ನಡಿಗನಾಗಿ ಇದನ್ನು ನಾನು ಸಹಿಸುವುದಿಲ್ಲ" ಎಂದು ಬರ್ಖಾ ವಿರುದ್ಧ ಗುಡುಗಿದ್ದಾರೆ. 

ರವಿ ಪ್ರತಿಪಾದಿಸುವ ಹಿಂದುತ್ವ ಸಿದ್ಧಾಂತವನ್ನು ಕಟುವಾಗಿ ವಿರೋಧಿಸುವ ಸಿದ್ದು ಅವರ ವಿರುದ್ಧ ರವಿ ಆಗಾಗ ಹೇಳಿಕೆ ಕೊಡುತ್ತಾರೆ. ಸಿದ್ದು ಕೂಡ ರವಿ ಯನ್ನು ಟೀಕಿಸುವ ಅವಕಾಶ ಯಾವತ್ತೂ ಕಳಕೊಳ್ಳುವುದಿಲ್ಲ. ಆದರೆ ಈ ಹಠಾತ್ ಪ್ರೀತಿಯ ಕಾರಣ ಏನು ಎಂಬುದು ಮಾತ್ರ ಸದ್ಯ ನಿಗೂಢವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News