ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಹೂಳೆತ್ತುವ ಕಾರ್ಯಾರಂಭ

Update: 2019-04-25 13:01 GMT

ಉಡುಪಿ, ಎ.25: ಸುಮಾರು 16 ವರ್ಷಗಳ ನಂತರ ಉಡುಪಿ ಶ್ರೀಕೃಷ್ಣ ಮಠದ ಮಧ್ವಸರೋವರದ ಹೂಳುತ್ತುವ ಕಾರ್ಯ ಗುರುವಾರ ಇಲ್ಲಿ ಪ್ರಾರಂಭಗೊಂಡಿದೆ.

16 ವರ್ಷಗಳ ಹಿಂದೆ (2002-04) ಪರ್ಯಾಯ ಪಲಿಮಾರುಶ್ರೀಗಳ ಮೊದಲ ಪರ್ಯಾಯಾವಧಿಯಲ್ಲೇ ಮಧ್ವ ಸರೋವರದ ಹೂಳೆತ್ತುವ ಕಾರ್ಯ ಮಾಡಲಾಗಿತ್ತು. ಆಗ ಮಠದ ಅಭಿಮಾನಿಗಳು ಹಾಗೂ ಸಾರ್ವಜನಿಕರು ಕರಸೇವೆಯ ಮೂಲಕ ಹೂಳೆತ್ತುವ ಕಾರ್ಯ ನಡೆಸಿದ್ದರು. ಇದೀಗ 16 ವರ್ಷಗಳ ನಂತರ ಯಂತ್ರಗಳ ನೆರವಿನಿಂದ ಮತ್ತೆ ಹೂಳೆತ್ತಲಾಗುತ್ತಿದೆ.

ಬುಧವಾರ ಅಪರಾಹ್ನ 2 ರಿಂದ ಗುರುವಾರ ಬೆಳಗ್ಗಿನ ಜಾವದವರೆಗೆ 5 ಪಂಪ್‌ಗಳನ್ನು ಅಳವಡಿಸಿ ಸರೋವರದಲ್ಲಿದ್ದ ನೀರನ್ನು ಖಾಲಿ ಮಾಡಿ, ರಾಜಾಂಗಣ ಹಾಗೂ ಸುತ್ತಲಿನ ಬಾವಿಗಳಿಗೆ ತುಂಬಿಸಲಾಯಿತು. ಮಧ್ವ ಸರೋವರದ ಒಳಗೆ 2 ಸಣ್ಣ ಸರೋವರವಿದ್ದು, ಇದರಲ್ಲಿ ಮುಂಭಾಗದ ಸರೋವರದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಗುರುವಾರ ಬೆಳಗ್ಗೆ ಕೃಷ್ಣ ಪೂಜೆ ಸ್ನಾನ ಮಾಡಿದ ಬಳಿಕ ಹೂಳೆತ್ತುವ ಕಾರ್ಯವನ್ನು ಆರಂಭಿಸಲಾಗಿದೆ.

ಶ್ರೀಗಳ ಹಾಗೂ ಇತರರ ದೈನಂದಿನ ಸ್ನಾನಕ್ಕಾಗಿ ಮೊದಲು ಸಣ್ಣ ಸರೋವರದ ಹೂಳೆತ್ತಿ ಶುದ್ಧೀಕರಿಸಲಾಗುತ್ತದೆ. ಇದರಲ್ಲಿ 5 ಅಡಿಯಷ್ಟು ಹೂಳು ತುಂಬಿದೆ ಎಂದು ಹೂಳೆತ್ತುವ ಕೆಲಸ ಮಾಡುತ್ತಿರು ಕಾರ್ಮಿಕರು ಅಭಿಪ್ರಾಯ ಪಟ್ಟಿದ್ದಾರೆ.

2002-2004ರ ತಮ್ಮ ಪ್ರಥಮ ಪರ್ಯಾಯ ಕಾಲದಲ್ಲಿ ಪಲಿಮಾರು ಶ್ರೀಗಳು ಮಧ್ವ ಸರೋವರದ ಕೆಸರು ತೆಗೆದು ಶುದ್ಧೀಕರಿಸಿದ್ದರು. ಇದೀಗ ಎರಡನೇ ಬಾರಿಗೆ ಮಧ್ವ ಸರೋವರವನ್ನು ಸುಮಾರು ಎರಡು ಲಕ್ಷ ರೂ. ವೆಚ್ಚದಲ್ಲಿ ಸ್ವಚ್ಛಗೊಳಸಲಾಗುತ್ತಿದೆ.

ಸುಮಾರು 50 ಸೆಂಟ್ಸ್ ವಿಸ್ತೀರ್ಣದಲ್ಲಿರುವ ಮಧ್ವ ಸರೋವರ ನಗರದ ಅತೀ ದೊಡ್ಡ ಕೆರೆಯಾಗಿದ್ದು, ದಿನದಿಂದ ದಿನಕ್ಕೆ ನೀರು ಬತ್ತುತ್ತಿದೆ. ಬೇಸಿಗೆ ಕಾಲದಲ್ಲಿ ಪ್ರತೀ ವರ್ಷ ಇಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಮೇ ತಿಂಗಳಲ್ಲಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಹೂಳೆತ್ತುವ ಕಾರ್ಯ ನಡೆದಿರುವುದರಿಂದ ಈ ವರ್ಷ ಅಂಥ ಸಮಸ್ಯೆ ಎದುಾಗಲಿಕ್ಕಿಲ್ಲ ಎಂಬ ನಿರೀಕ್ಷೆ ಶ್ರೀಗಳದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News