ಬಿಲ್ಕೀಸ್ ಬಾನುಗೆ ಪರಿಹಾರ ನೀಡಲು ಸುಪ್ರೀಂಕೋರ್ಟ್ ಸೂಚನೆ: ಪಿಎಫ್ಐ ಸ್ವಾಗತ

Update: 2019-04-25 15:15 GMT

ಮಂಗಳೂರು: ಬಿಲ್ಕೀಸ್ ಬಾನು ಅವರಿಗೆ 50 ಲಕ್ಷ ರೂ. ಪರಿಹಾರ ಮತ್ತು ಸರಕಾರಿ ಉದ್ಯೋಗ ನೀಡುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸ್ವಾಗತಿಸಿದೆ ಎಂದು ಪಿಎಫ್ಐ ಚೆಯರ್ ಮ್ಯಾನ್ ಇ. ಅಬೂಬಕರ್ ತಿಳಿಸಿದ್ದಾರೆ.

ಈ ಆದೇಶವು 2002ರ ಮುಸ್ಲಿಂ ವಿರೋಧಿ ಗಲಭೆಯ ವೇಳೆ ಆಡಳಿತದಲ್ಲಿದ್ದ ಬಿಜೆಪಿಯ ಉನ್ನತ ಮಟ್ಟದ ದುಷ್ಠ ನಾಯಕತ್ವಕ್ಕೆ ನೀಡಿದ ಹೊಡೆತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್ ಗಲಭೆ ಸಂದರ್ಭದಲ್ಲಿ, ಗರ್ಭಿಣಿಯಾಗಿದ್ದ  ಬಿಲ್ಕೀಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ ಮೂರು ವರ್ಷದ ಮಗು ಸಹಿತ  ಕುಟುಂಬದ 14 ಮಂದಿಯನ್ನು ಗುಂಪು ಹತ್ಯೆ ಮಾಡಿತ್ತು. 2002ರ ಗಲಭೆಯ ನಂತರ ಆಕೆ ಅಲೆಮಾರಿ ಜೀವನ ನಡೆಸುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಆಕೆ ಇಚ್ಚಿಸುವ ಪ್ರದೇಶದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ಗುಜರಾತ್ ಸರ್ಕಾರಕ್ಕೆ ನಿರ್ದೇಶಿಸಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಮತ್ತು ಸಂತ್ರಸ್ತೆಗೆ  ಕೇವಲ ರೂ.5 ಲಕ್ಷ ಪರಿಹಾರ ಘೋಷಿಸಿರುವ ಗುಜರಾತ್ ಸರಕಾರದ ಕ್ರಮವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ತೀರ್ಪು ಅಧಿಕಾರ ದುರುಪಯೋಗ ಮತ್ತು ತಾರತಮ್ಯದ ವಿರುದ್ಧ ಸುಪ್ರೀಂ ಕೋರ್ಟಿನ ಸೂಚನೆಯಾಗಿದ್ದು, ಇದು ಗಲಭೆಯ ಸಮಯದಲ್ಲಿ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಬಿಜೆಪಿಯ ಉನ್ನತ ನಾಯಕರುಗಳಾದ  ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ತಲೆತಗ್ಗಿಸುವಂತೆ ಮಾಡಿದೆ. ಕನಿಷ್ಠ ಇನ್ನಾದರೂ ಅವರು ಆ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕಾಗಿದೆ ಎಂದು ಇ. ಅಬೂಬಕರ್ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News