‘ಶಾಂತಿ, ಪ್ರೀತಿ, ಅಹಿಂಸೆಯಿಂದ ಮಾತ್ರ ಜಗತ್ತನ್ನು ಜಯಿಸಲು ಸಾಧ್ಯ’

Update: 2019-04-25 15:27 GMT

ಉಡುಪಿ, ಎ.25: ಶಾಂತಿ, ಪ್ರೀತಿ, ಅಹಿಂಸೆಗಳಿಂದ ಮಾತ್ರ ಜಗತ್ತಿನ ಮಾನವ ಕುಲವನ್ನು ಜಯಿಸಲು ಸಾಧ್ಯವಿದೆ. ಭಯೋತ್ಪಾದನೆ, ಹಿಂಸೆ, ಕ್ರೌರ್ಯ ಗಳಿಂದ ಜಗತ್ತನ್ನು ಜಯಿಸಲು ಸಾಧ್ಯವಿಲ್ಲ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಶ್ರೀಲಂಕಾದ ಕೊಲಂಬೊ ಸೇರಿದಂತೆ ವಿವಿಧ ನಗರಗಳಲ್ಲಿ ಈಸ್ಟರ್ ಹಬ್ಬದ ದಿನ ಭಯೋತ್ಪಾದಕರ ದಾಳಿಗೆ ಬಲಿಯಾದವರ ಆತ್ಮಗಳಿಗೆ ಸದ್ಗತಿ ಕೋರಿ ಉಡುಪಿ ಶೋಕಮಾತಾ ಇಗರ್ಜಿಯ ಆವರಣದಲ್ಲಿ ಗುರುವಾರ ಸಂಜೆ ಆಯೋಜಿಸಲಾದ ಉಡುಪಿ ಧರ್ಮಪ್ರಾಂತದ ಕ್ರೈಸ್ತ ಬಾಂಧವರ ಮೌನ ಪ್ರಾರ್ಥನೆ ಹಾಗೂ ಮೊಂಬತ್ತಿ ಬೆಳಗಿ ಶೃದ್ದಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಎ.21ರಂದು ಜಗತ್ತಿನಾದ್ಯಂತ ಪಾಸ್ಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಸಮಯದಲ್ಲಿ ಶ್ರೀೀಲಂಕಾದ ಜನತೆಗೆ ಕರಾಳ ದಿನ ವಾಯಿತು. ಶ್ರೀಲಂಕಾದ ಚರ್ಚ್, ಹೋಟೆಲು ಹಾಗೂ ಇನ್ನಿತರ ಕಡೆಗಳಲ್ಲಿ ನಡೆದ 9 ಮಂದಿ ಆತ್ಮಹತ್ಯಾ ದಾಳಿಕೋರರ ದುಷ್ಕೃತ್ಯಕ್ಕೆ ಈಗಾಗಲೇ 359 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 10 ಮಂದಿ ಭಾರತೀಯರು ಹಾಗೂ ಇವರಲ್ಲಿ ಏಳು ಮಂದಿ ಕರ್ನಾಟಕದವರಿದ್ದಾರೆ. ಈ ಘಟನೆಯಲ್ಲಿ 45ಕ್ಕೂ ಅಧಿಕ ಮುಗ್ದ ಮಕ್ಕಳು ಸಹ ತಮ್ಮದಲ್ಲದ ತಪ್ಪಿಗೆ ಪ್ರಾಣತೆತ್ತು ಅಮರಾದರು ಎಂದು ಬಿಷಪ್ ನುಡಿದರು.

ಈ ಕ್ರೂರ ಕೃತ್ಯವನ್ನು ಇಡೀ ಜಗತ್ತು ಖಂಡಿಸಿದೆ. ಜಗತ್ತನ್ನು, ಬದುಕನ್ನು ಕಟ್ಟುವುದು ಎಷ್ಟು ಕಷ್ಟ ಎಂಬುದನ್ನು, ಬದುಕನ್ನು ನಾಶ ಮಾಡುವವರು ಅರ್ಥ ಮಾಡಿಕೊಂಡರೆ ಉತ್ತಮ. ಭಯೋತ್ಪಾದನೆ, ಹಿಂಸೆ, ದ್ವೇಷ ಹಾಗೂ ಕ್ರೂರಕೃತ್ಯ ಗಳಿಂದ ಜಗತ್ತನ್ನು ನಾಶ ಮಾಡಬಹುದೇ ಹೊರತು, ಜಗತ್ತನ್ನು ಜಯಿಸಲು ಅಸಾಧ್ಯ ಎಂದರು.

ಸಭೆಯಲ್ಲಿ ವಿವಿಧ ಸಭೆಗಳ ಧರ್ಮಗುರುಗಳು ಹಾಗೂ ಕ್ರೈಸ್ತ ಭಾಂಧವರು ಭಾಗವಹಿಸಿ ಮೃತರ ಆತ್ಮಗಳಿಗೆ ಸದ್ಗತಿ ಕೋರಿ ಪ್ರಾರ್ಥಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲರೂ ಮೊಂಬತ್ತಿಗಳನ್ನು ಬೆಳಗುವುದರ ಮೂಲಕ ಮೃತ ಆತ್ಮಗಳಿಗೆ ಶಾಂತಿಯನ್ನು ಕೋರಿದರು.

ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಗುರು ವಂ. ಡಾ. ಬ್ಯಾಪ್ಟಿಸ್ಟ್ ಮಿನೇಜಸ್, ಸಿಎಸ್‌ಐ ಸಭೆಯ ವಂ. ಸ್ಟೀವನ್ ಸರ್ವೋತ್ತಮ, ವಂ.ನೋಯೆಲ್ ಕರ್ಕಡ, ಉಡುಪಿ ಧರ್ಮಪ್ರಾಂತದ ಧರ್ಮಗುರುಗಳಾದ ವಂ.ವಿಲಿಯಂ ಮಾರ್ಟಿಸ್, ವಂ.ಲಾರೆನ್ಸ್ ಡಿಸೋಜ, ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ. ಸ್ಟೀವನ್ ಡಿಸೋಜ, ವಂ.ವಿನ್ಸೆಂಟ್ ಕುವೆಲ್ಲೊ, ವಂ. ಫ್ರಾನ್ಸಿಸ್ ಕರ್ನೆಲಿಯೋ, ವಂ.ವಿಜಯ್ ಡಿಸೋಜ, ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ವಂ.ಆಲ್ಫೋನ್ಸ್ ಡಿಲೀಮಾ, ವಂ.ರೋಯ್ಸನ್ ಫೆರ್ನಾಂಡಿಸ್, ಉಡುಪಿ ಧರ್ಮಪ್ರಾಂತದ ಐಸಿವೈಎಂ ಸಂಘಟನೆಯ ಅಧ್ಯಕ್ಷ ಡಿಯೋನ್ ಡಿಸೋಜಾ, ಮಹಿಳಾ ಸಂಘಟನೆಯ ಜಾನೆಟ್ ಬಾರ್ಬೋಜಾ, ಕೆಥೊಲಿಕ್ ಸಭಾದ ಆಲ್ವಿನ್ ಕ್ವಾಡ್ರಸ್ ಹಾಗೂ ಜಿಲ್ಲಾ ಮುಸ್ಲಿಂ ಒಕ್ಕೂಟದ ಯಾಸಿನ್ ಮಲ್ಪೆ ಹಾಗೂ ಮುಹಮ್ಮದ್ ಮೌಲಾ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತದ ಐಸಿವೈಎಮ್ ಸಂಘಟನೆಯ ಅಧ್ಯಕ್ಷ ಡಿಯೋನ್ ಡಿಸೋಜ ಸ್ವಾಗತಿಸಿ, ಧರ್ಮಪ್ರಾಂತದ ಪಾಲನಾ ಪರಿಷತ್ ಕಾರ್ಯದರ್ಶಿ ಆಲ್ಫೋನ್ಸ್ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News