ಚುನಾವಣಾ ನೀತಿ ಸಂಹಿತೆ ಸಡಿಲಗೊಳಿಸಿ: ಕೋಟ ಮನವಿ

Update: 2019-04-25 15:28 GMT

ಉಡುಪಿ, ಎ.25: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂ ಡಿರುವುದರಿಂದ ಚುನಾವಣೆಯ ಸಂದರ್ಭದಲ್ಲಿ ಜಾರಿಗೊಳಿಸಿರುವ ಚುನಾವಣಾ ನೀತಿಸಂಹಿತೆಯನ್ನು ಸಡಿಲಗೊಳಿಸುವಂತೆ ರಾಜ್ಯ ವಿಧಾನ ಪರಿಷತ್‌ನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಚುನಾವಣೆ ಎ.23ಕ್ಕೆ ಮುಕ್ತಾಯಗೊಂಡಿದ್ದರೂ, ಜಿಲ್ಲಾಡಳಿತ ಸೇರಿದಂತೆ ಸರಕಾರಿ ಕಚೇರಿಗಳಲ್ಲಿ ಮೇ27ರವರೆಗೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುತ್ತದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಜೆಟ್‌ನಲ್ಲಿ ಘೋಷಿಸಿರುವ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡದಿರುವ ಕಾರಣ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಡವರ ಹಾಗೂ ಗ್ರಾಮೀಣ ಭಾಗದ ಸರಕಾರಿ ಕಾರ್ಯಕ್ರಮಗಳ ಅನುಷ್ಠಾನ ಕುಂಠಿತಗೊಂಡಿದೆ ಎಂದವರು ಹೇಳಿದ್ದಾರೆ.

ಕೇಂದ್ರದ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಕೃಷಿ ಸಮ್ಮಾನ್ ಯೋಜನೆ ಚಾಲ್ತಿಯಲ್ಲಿರುವಾಗ ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಆನ್‌ಲೈನ್ ಅರ್ಜಿ ಸ್ವೀಕೃತಿಯನ್ನು ತಡೆಹಿಡಿಯಲಾಗಿತ್ತು. ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ಮುಗಿದಿರುವುದರಿಂದ ಅರ್ಜಿ ಸ್ವೀಕೃತಿಯನ್ನು ಪ್ರಾರಂಭಿಸಲು ಕೃಷಿ ಇಲಾಖೆಗೆ ನಿರ್ದೇಶನ ನೀಡುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.

ರಾಜ್ಯದಲ್ಲಿ ಕಂದಾಯ ಇಲಾಖೆ ಕಾಯ್ದೆ ಮೂಲಕ ಜಾರಿಯಾಗುತ್ತಿರುವ ಅಕ್ರಮ-ಸಕ್ರಮ ಯೋಜನೆಯ ನಮೂನೆ 57 ಅರ್ಜಿ ಸ್ವೀಕೃತಿಯನ್ನು ಸಹ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವ ಮೂಲಕ ಕೂಡಲೇ ಆನ್‌ಲೈನ್ ಅರ್ಜಿ ಸ್ವೀಕೃತಿಯನ್ನು ಪ್ರಾರಂಭಿಸಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯಲ್ಲಿ ಮಂಜೂರಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನು ಮತಿ ಅಗತ್ಯವಿದ್ದು, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಮಳೆಗಾಲಕ್ಕೆ ಮುನ್ನವೇ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಾಗೂ ಬಡವರಿಗೆ ಕೂಲಿ ಕೆಲಸ ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚುನಾವಣಾ ನೀತಿ ಸಂಹಿತೆ ಯಿಂದ ಸಂಪೂರ್ಣ ರಿಯಾಯಿತಿ ನೀಡುವಂತೆ ಕೋರಿದ್ದಾರೆ.

ಚುನಾವಣಾ ನೀತಿ ಸಂಹಿತೆಯ ಕಾರಣಕ್ಕಾಗಿ ಮುಚ್ಚಿರುವ ಶಾಸಕರು, ಜಿಪಂ ಅಧ್ಯಕ್ಷರ ಕಚೇರಿಗಳನ್ನು ಸಾರ್ವಜನಿಕರ ದೈನಂದಿನ ಭೇಟಿಗೆ ಅನುಕೂಲ ವಾಗು ವಂತೆ ತೆರೆಯಲು ಅವಕಾಶ ನೀಡಲು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡುವಂತೆಯೂ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News